ಹತ್ರಾಸ್‌ ಅತ್ಯಾಚಾರ ಪ್ರಕರಣ : ರಾಹುಲ್‌, ಪ್ರಿಯಾಂಕ ಭೇಟಿಗೆ ತಡೆ

ಲಕ್ನೊ, ಅ.1: ದೇಶಾದ್ಯಂತ ಪ್ರತಿಭಟನೆಯ ಕಿಡಿ ಹೊತ್ತಿಸಿರುವ ಹತ್ರಾಸ್‌ ಅತ್ಯಾಚಾರ ಪ್ರಕರಣ ಇಂದು ಉತ್ತರ ಪ್ರದೇಶದಲ್ಲಿ ಬಾರಿ ಪ್ರಮಾಣದ ಚಕಮಕಿಗೆ ಕಾರಣವಾಯಿತು. ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ದಲಿತ ಯುವತಿಯ ಕುಟುಂಬದವರನ್ನು ಭೇಟಿಯಾಗಲು ಹೊರಟಾಗ ಪೊಲೀಸರು ಅವರನ್ನು ತಡೆದರು. ಬಳಿಕ ರಾಹುಲ್‌ ಮತ್ತು ಪ್ರಿಯಾಂಕ ನಡೆದುಕೊಂಡೇ ಸಂತ್ರಸ್ತೆಯ ಊರಿಗೆ ಹೋದರು.

ಯಮುನಾ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ತನ್ನ ವಾಹನವನ್ನು ತಡೆದ ಪೊಲೀಸರ ಜೊತೆಗೆ ರಾಹುಲ್‌ ಗಾಂಧಿ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಉದ್ರಿಕ್ತರಾದಾಗ ಪೊಲೀಸರು ಲಾಠಿಚಾರ್ಜ್‌ ಮಾಡಿ ಅವರನ್ನು ಚದುರಿಸಿದರು. ಅಲ್ಲಿ ಚಿಕ್ಕಮಟ್ಟದ ತಳ್ಳಾಟ ನಡೆಯಿತು ಎಂದು ವಾಹಿನಿಗಳು ವರದಿ ಮಾಡಿವೆ. ಇಲ್ಲಿಂದ ರಾಹುಲ್‌ ಮತ್ತು ಪ್ರಿಯಾಂಕ ಕಾಲ್ನಡಿಗೆ ಪ್ರಾರಂಭಿಸಿದರು.

ಹೊಲದಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಯುವತಿ 15 ದಿನ ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೆ ಮಂಗಳಾರ ಸಾವನ್ನಪ್ಪಿದ್ದಾರೆ. ಅತ್ಯಾಚಾರಿಗಳು ಅವರ ಬೆನ್ನುಮೂಳೆ ಮುರಿದು, ನಾಲಗೆ ಕತ್ತರಿಸಿ ಹಾಕಿದ್ದರು. ಇದು ದಿಲ್ಲಿಯ ನಿರ್ಭಯಾ ಘಟನೆಯನ್ನು ನೆನಪಿಸಿದ್ದು ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಪೊಲೀಸರು ಅವಸರದಲ್ಲಿ ಯುವತಿಯ ಅಂತ್ಯಕ್ರಿಯೆ ನೆರವೇರಿಸಿದ್ದು ವಿವಾದಕ್ಕೀಡಾಗಿದೆ. ಯುವತಿಯ ಮನೆಯವರಿಗೂ ತಿಳಿಸದೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ರಾಜೀನಾಮೆಗೆ ಆಗ್ರಹಿಸಿವೆ.

ಈ ನಡುವೆ ಉತ್ತರ ಪ್ರದೇಶ ಸರಕಾರ ಹತ್ರಾಸ್‌ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ.





























































































































error: Content is protected !!
Scroll to Top