ಕಾರ್ಕಳ : ಇಂದಿನ ದಿನಮಾನದಲ್ಲಿ ಉದ್ಯೋಗ ಮಾರುಕಟ್ಟೆಯ ಪೈಪೋಟಿ ಎದುರಿಸಿ ಯಶಸ್ವಿಯಾಗಲು ಹೆಚ್ಚುವರಿ ಕೌಶಲ್ಯದ ಅಗತ್ಯವಿರುತ್ತದೆ. ಜಿ.ಎಸ್.ಟಿ. ತರಬೇತಿಯು ಈ ನಿಟ್ಟಿನಲ್ಲಿ ಪೂರಕ ಎಂದು ಡೇವಿಡ್ ಡಿಮೆಲ್ಲೊ ಅಭಿಪ್ರಾಯಪಟ್ಟರು.
ಅವರು ಕಾರ್ಕಳದ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಹಾಗೂ ಸ್ಮಾರ್ಟ್ ಪ್ರೊಫೆಶನಲ್ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಹಯೋಗದೊಂದಿಗೆ ಆಯೋಜಿಸಲಾದ ಜಿ.ಎಸ್.ಟಿ. ಸರ್ಟಿಫಿಕೇಟ್ ಕೋರ್ಸಿನ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ತರಬೇತಿದಾರ ಆಲ್ಬನ್ ಆಂತೋನಿ ಪಿರೇರಾ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಆಫ್ ಲೈನ್ ಹಾಗೂ ಆನ್‍ಲೈನ್ ವೇದಿಕೆಗಳಲ್ಲಿ ನಡೆಯಲಿರುವ ಈ ಕೋರ್ಸಿನ ರೂಪುರೇಷೆ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಎಂ., ವಿದ್ಯಾರ್ಥಿಗಳು ಇಂತಹ ಹೆಚ್ಚುವರಿ ತರಬೇತಿಗಳನ್ನು ಪಡೆದುಕೊಳ್ಳಬೇಕೆಂದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಜ್ಯೋತಿ ಎಲ್. ಜನ್ನೆ, ಪಿ.ಜಿ. ವಿಭಾಗದ ಸಂಯೋಜಕರಾದ ವಿದ್ಯಾಧರ್ ಹೆಗ್ಡೆ, ಪಿ.ಜಿ. ವಿಭಾಗದ ಪ್ಲೇಸ್‍ಮೆಂಟ್ ಸಂಚಾಲಕ ಮೈತ್ರಿ. ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ನ ಸಂಚಾಲಕರಾದ ಸುಷ್ಮಾ ರಾವ್ ಕೆ. ಕಾರ್ಯಕ್ರಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಭಂಢಾರಿ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕ ವೃಂದದವರಾದ ಯೋಗೀಶ್, ನವೀನ್, ವೆಂಕಟೇಶ್, ಗಣೇಶ್, ಮಂಜುನಾಥ್, ಜ್ಯೋತಿ ಶೆಟ್ಟಿ, ಸುಮಂತ್ ಕುಮಾರ್ ಸಹಕರಿಸಿದರು.































































