ಆರೋಗ್ಯ ಧಾರಾ- ಮಗುವಿನ ಆಹಾರ

ಭಾಗ 2

ಆರು ತಿಂಗಳಿನಿಂದ ಒಂದು ವರ್ಷದ ಮಗುವಿಗೆ ನೀಡಬೇಕಾದ ಆಹಾರ

1. ಅನ್ನಪ್ರಾಶನ ಸಂಸ್ಕಾರವಾದ  ಮೇಲೆ ತೆಳುವಾದ ರವೆಯ ಖೀರು ನೀಡಲು ಪ್ರಾರಂಭಿಸಬೇಕು.ಮೊದಲಿಗೆ ಒಂದು ಅಥವಾ ಎರಡು ಚಮಚ ಸಾಕಾಗುತ್ತದೆ. ಕ್ರಮೇಣ ಮಗುವಿನ  ಜೀರ್ಣಶಕ್ತಿಯ ಅನುಸಾರ ಪ್ರಮಾಣವನ್ನು ಹೆಚ್ಚಿಸಿ.

2. ಖೀರು ನೀಡಿದ ಸ್ವಲ್ಪ ದಿನಗಳ ತರುವಾಯ ಹಣ್ಣಿನ ರಸವನ್ನು ನೀಡಬೇಕು. ಜೀರ್ಣಕ್ಕೆ ಸುಲಭವಾಗುವಂತೆ ಮೂಸಂಬಿ ರಸ ,ದಾಳಿಂಬೆ ರಸ  ಒಂದು ಅಥವಾ ಎರಡು ಚಮಚ ನೀಡಿ. ಯಾವುದೇ ಹಣ್ಣಿನ ರಸವನ್ನು ಬಿಸಿ ಮಾಡುವುದು ಹಾನಿಕಾರಕ. ಜ್ಯೂಸ್ ಮಾಡುವುದಿದ್ದರೆ ಅದಕ್ಕೆ ಕುದಿಸಿ ಆರಿಸಿದ ನೀರನ್ನು ಮಿಶ್ರಣ ಮಾಡಿ. ಒಂದು ವರುಷದ ತನಕ ಸ್ಟ್ರಾಬೆರಿ, ಸೀತಾಫಲ, ಪೇರಲೆ ಹಣ್ಣನ್ನು ನೀಡಬೇಡಿ. ಸೇಬನ್ನು ಬೇಯಿಸಿ ಹಿಸುಕಿ ಒಂದು ಅಥವಾ ಎರಡು ಚಮಚ ನೀಡಿ.

2. ತರಕಾರಿ ಬೇಯಿಸಿದ ನೀರು ಅಥವಾ ಬೇಳೆಯ ನೀರಿಗೆ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಉಪ್ಪನ್ನು ಬೆರೆಸಿ ನೀಡಿ. ಮೊದಲಿಗೆ ಒಂದು ಅಥವಾ ಎರಡು ಚಮಚ ನೀಡಿ ಕ್ರಮೇಣ ಹೆಚ್ಚಿಸಿ.ಹಣ್ಣನ್ನು ಪರಿಚಯಿಸಿದ ಸ್ವಲ್ಪ ದಿನಗಳ ತರುವಾಯ ತರಕಾರಿಗಳನ್ನು ನೀಡಲು ಆರಂಭಿಸಿ.

4. ತರಕಾರಿಯನ್ನು ನೀಡುವಾಗ ಮೊದಲಿಗೆ ಬಟಾಟೆ ,ಕ್ಯಾರೆಟ್, ಹಸಿರು ಬಟಾಣಿ ಸರಿಯಾಗಿ ಬೇಯಿಸಿ, ಹಿಸುಕಿ ಸ್ವಲ್ಪ ಉಪ್ಪು ಹಾಗೂ ತುಪ್ಪವನ್ನು ಬೆರೆಸಿ ನೀಡಿರಿ.ಕ್ರಮೇಣ ಮಕ್ಕಳ ಜೀರ್ಣ ಶಕ್ತಿಯ ಅನುಸಾರ ಪ್ರಮಾಣವನ್ನು ಹೆಚ್ಚಿಸಿ . ಶುದ್ಧವಾದ ತಾಜಾ ತರಕಾರಿಯನ್ನು ನೀಡಿ . ಪಾಲಕ್, ಸೌತೆಕಾಯಿ ,ಮೆಂತೆ ಸೊಪ್ಪು, ಬೂದಗುಂಬಳ ನೀಡಬಹುದು. ಇದನ್ನು ಸರಿಯಾಗಿ ಬೇಯಿಸಿ ಸರಿಯಾಗಿ ಹಿಸುಕಿ ಅದಕ್ಕೆ ಸ್ವಲ್ಪ ತುಪ್ಪ ಹಾಗೂ ಉಪ್ಪನ್ನು ಸೇರಿಸಿ ಒಂದು ಅಥವಾ ಎರಡು ಚಮಚ ನೀಡಿ ಕ್ರಮೇಣ ಪ್ರಮಾಣವನ್ನು ಹೆಚ್ಚಿಸಿ.

 ಒಂದು ವರ್ಷದ ಒಳಗಿನ ಮಕ್ಕಳಿಗೆ ನೀಡಬಾರದ ಆಹಾರ

ಮೈದಾದಿಂದ ತಯಾರಿಸಿದ ಆಹಾರ,ಪೇರಳೆ ಹಣ್ಣು ,ಸ್ಟ್ರಾಬೆರಿ ,ಮಾವಿನ ಹಣ್ಣು ,ಹಲಸಿನ ಹಣ್ಣು ,ಬೀನ್ಸ್ .

ಒಂದು ವರ್ಷದ ಮಗುವಿಗೆ ನೀಡಬಹುದಾದ ಆಹಾರ

ಮಗು ಒಂದು ವರ್ಷವಾದಾಗ ನಾವು ಸೇವಿಸುವ ಪ್ರತಿಯೊಂದು ಹಿತವಾದ ಆಹಾರವನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀಡಬೇಕು.ಆಹಾರವನ್ನು ಹಿಸುಕುವ ಅವಶ್ಯಕತೆ ಇರುವುದಿಲ್ಲ, ಘನ ಆಹಾರವನ್ನು ನೀಡಬಹುದು . ದಿನಕ್ಕೆ ಒಂದು ಊಟ ನಮ್ಮ ಜೊತೆ ಕೂತು ಸೇವಿಸಿದರೆ ಒಳ್ಳೆಯದು . ಆಹಾರದಲ್ಲಿ ಸಲಾಡ್ ,ಬೇಳೆ, ಸಾರು, ಅನ್ನ ಹೀಗೆ ಎಲ್ಲ ಇರಲಿ. ಎಲ್ಲರೂ ಒಟ್ಟಿಗೆ ಕುಳಿತು ಆಹಾರವನ್ನು ಸೇವಿಸುವುದು ಉತ್ತಮ ಕ್ರಮ.  ಟಿವಿ ಮೊಬೈಲ್ ಎದುರುಗಡೆ ಕೂತು ಊಟವನ್ನು ಮಾಡುವುದು ಹಿತವಲ್ಲ.

ನೀಡ ಬಾರದಂತಹ ಆಹಾರ

 ಮೊಟ್ಟೆ, ಮಾಂಸಾಹಾರ ,ಬ್ರೆಡ್, ಹುದುಗಿಸಿದ ಆಹಾರ  ಒಂದೂವರೆ ವರ್ಷದ ತನಕ ನೀಡಬಾರದು. ಮೂರು ವರ್ಷದ ತನಕ ಚಿಪ್ಸ್, ಐಸ್ಕ್ರೀಮ್ ,ಚಾಕೊಲೇಟ್  ನೀಡಬೇಡಿ.

ಆರೋಗ್ಯಕರ ಆಹಾರ ಸೇವಿಸಲು ಮಗುವನ್ನು  ಪ್ರೋತ್ಸಾಹಿಸಿ.ಅದರೆ ಒತ್ತಾಯ ಮಾಡಬೇಡಿರಿ. ಆಹಾರ ಜೀರ್ಣವಾಗಲು ಸರಿಯಾದ ನಿದ್ದೆ ಬಹಳ ಅವಶ್ಯಕ .ಮನೆಯ ವಾತಾವರಣ ಹಿತವಾಗಿರಲಿ.ಹೊರಗಿನ ಆಹಾರ ನೀಡಬೇಡಿ ಹಾಗೂ ಬಣ್ಣ ಹಾಕಿದ, ಸಂಸ್ಕರಿಸಿದ  ,ಪ್ರಿಸರ್ವೇಟಿವ್ ಸೇರಿಸಿದ  ತಿಂಡಿಯನ್ನು ನೀಡಬೇಡಿ.

ಪ್ರತಿಯೊಂದು ಮಗುವಿನ ಜೀರ್ಣ ಶಕ್ತಿಯೂ ವಿಭಿನ್ನವಾಗಿರುವುದರಿಂದ ಅದಕ್ಕೆ ಅನುಸಾರವಾಗಿ ಆಹಾರವನ್ನು ನೀಡಿ.

ಡಾ. ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು





























































































































error: Content is protected !!
Scroll to Top