ಕಾರ್ಕಳ-ಹೆಬ್ರಿ : ಕೊರೊನಾಕ್ಕೆ ಒಟ್ಟು 33 ಬಲಿ

ಕಾರ್ಕಳ , ಸೆ. 26: ಕೊರೊನಾ ವೈರಸ್‌ ಸೋಂಕು ಇದೀಗ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಆಗಸ್ಟ್‌, ಸೆಪ್ಟಂಬರ್‌ ತಿಂಗಳಲ್ಲಿ ಪಾಸಿಟಿವ್‌ ಸಂಖ್ಯೆ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದ್ದು, ಕಾರ್ಕಳ-ಹೆಬ್ರಿ ತಾಲೂಕಿನಲ್ಲಿ ಒಟ್ಟು ಈವರೆಗೆ 33 ಮಂದಿ ಬಲಿಯಾಗಿದ್ದಾರೆ. ಕಾರ್ಕಳದಲ್ಲಿ ಪ್ರಸ್ತುತ ಅಂದಾಜು 250 ಮಂದಿ ಸಕ್ರಿಯ ಕೊರೊನಾ ಪೀಡಿತರಿದ್ದಾರೆ.

ಕೊರೊನಾ ಕುರಿತು ಅಸಡ್ಡೆ ಬೇಡ

ಸಾಕಷ್ಟು ಸೌಲಭ್ಯ, ವ್ಯವಸ್ಥೆ ಹೊಂದಿರುವ ಸಚಿವರು, ಸಂಸದರು, ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳೇ ಕೊರೊನಾ ವಿರುದ್ಧ ಸೆಣಸಲು ವಿಫಲರಾಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೊರೊನಾ ನಮಗೆ ಬರುವುದಿಲ್ಲ ಎಂಬ ಹುಂಬ ಧೈರ್ಯ ಯಾರೂ ಇಟ್ಟುಕೊಳ್ಳುವುದು ಸರಿಯಲ್ಲ. ತುಸು ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಸರಕಾರ, ಜಿಲ್ಲಾಧಿಕಾರಿ, ವೈದ್ಯರು ಕೊರೊನಾದ ಬಗ್ಗೆ ಮುಂಜಾಗ್ರತೆ ವಹಿಸಲು ಕರೆ ನೀಡಿರುತ್ತಾರೆ. ಸರಕಾರ ರೂಪಿಸಿದ ನೀತಿ ನಿಯಮಗಳನ್ನು ತಾತ್ಸಾರ ಭಾವನೆಯಿಂದ ಕಾಣದೇ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಅತಿ ಅಗತ್ಯ. ಈ ಕುರಿತು ಉದಾಸೀನತೆ, ನಿರ್ಲಕ್ಷ್ಯ ವಹಿಸಿದರೆ ಭಾರಿ ಪ್ರಮಾಣದಲ್ಲಿ ಬೆಲೆ ತೆರಬೇಕಾದೀತು. ಕೊರೊನಾ ದೂರವಾಗುವ ತನಕ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.

ಟೆಸ್ಟ್‌ ಮಾಡಿಸಿ – ಕೊರೊನಾ ತಡೆಗಟ್ಟಿ

ಕೊರೊನಾ ಗುಣಲಕ್ಷಣ ಇರುವ ಎಲ್ಲರೂ ಕೊರೊನಾ ಟೆಸ್ಟಿಂಗ್‌ ಕೇಂದ್ರಕ್ಕೆ ತೆರಳಿ ಪರೀಕ್ಷೆ ನಡೆಸುವುದು ಉತ್ತಮ. ಅನೇಕರು ಟೆಸ್ಟ್‌ ಮಾಡಿಸದೇ ಮನೆಯಲ್ಲೇ ಇದ್ದು, ಉಲ್ಬಣವಾದ ಬಳಿಕ ಆಸ್ಪತ್ರೆಯತ್ತ ಧಾವಿಸುತ್ತಾರೆ. ಮಧುಮೇಹ, ರಕ್ತದೊತ್ತಡ, ಅಸ್ತಮ, ಹೃದಯ ಸಂಬಂಧಿತ ಕಾಯಿಲೆ ಬಾಧಿತರಿಗೆ ಕೊರೊನಾ ಹೆಚ್ಚಾಗಿ ಕಾಡುತ್ತಿದ್ದು, ಅಂತವರು ತಡವಾಗಿ ಆಸ್ಪತ್ರೆಗೆ ದಾಖಲಾದರೆ ಹೆಚ್ಚು ತೊಂದರೆಗೀಡಾಗುತ್ತಾರೆ.

19 ಟೆಸ್ಟಿಂಗ್‌ ಸೆಂಟರ್‌ ಕಾರ್ಕಳದಲ್ಲಿವೆ

ಕಾರ್ಕಳ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲದೇ 18 ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಕೊರೊನಾ ಟೆಸ್ಟ್‌ ಮಾಡಿಸಲಾಗುತ್ತಿದೆ. ಇದಲ್ಲದೇ 4 ಮೊಬೈಲ್ ಯೂನಿಟ್‌ ಕೂಡ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಜನತೆ ಸುಲಭವಾಗಿ ಟೆಸ್ಟ್‌ ಮಾಡಿಸಬಹುದಾಗಿದೆ. ಕೊರೊನಾ ಕುರಿತು ಅಸಡ್ಡೆ ಮನೋಭಾವ ತಾಳದೇ ಗಂಬೀರವಾಗಿ ಪರಿಗಣಿಸಿ ಟೆಸ್ಟ್‌ ಮಾಡಿಸುವುದರಿಂದ ಮನೆಯಲ್ಲಿರುವ ಹಿರಿಯರಿಗೆ, ಮಕ್ಕಳಿಗೆ ಕೊರೊನಾ ಬಾಧಿಸದಂತೆ ತಡೆಗಟ್ಟಬಹುದಾಗಿದೆ.

ಕಾಲ್‌ ಸೆಂಟರ್‌ ಸೇವೆ

ಕಾರ್ಕಳದಲ್ಲಿ ಕೋವಿಡ್‌ ಸಹಾಯವಾಣಿ ತೆರೆಯಲಾಗಿದ್ದು, ಸಾರ್ವಜನಿಕರು ಕೊರೊನಾ ಕುರಿತಾಗಿ ಮಾಹಿತಿ, ಟೆಸ್ಟಿಂಗ್‌ ಸೇರಿದಂತೆ ಪ್ರತಿಯೊಂದು ಮಾಹಿತಿ ಪಡೆಯಬಹುದಾಗಿದೆ. 7676227624,7411323408 ನಂಬರ್‌ ಸಂಪರ್ಕಿಸಬಹುದಾಗಿದ್ದು, ಈಗಾಗಲೇ ಈ ವ್ಯವಸ್ಥೆ ಕುರಿತು ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರತಿಯೊಬ್ಬರು ಅಗತ್ಯವಾಗಿ ಕೊರೊನಾ ಟೆಸ್ಟ್‌ ಮಾಡಿಸಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್‌ ಬಳಕೆ, ಮಾಸ್ಕ್‌ ಕಡ್ಡಾಯವಾಗಿ ಧರಿಸಿ ಕೊರೊನಾ ತಡೆಗಟ್ಟಬೇಕು. ಕೊರೊನಾ ಕುರಿತು ನಿರ್ಲಕ್ಷ್ಯ ಮಾಡಿದಲ್ಲಿ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾದಿತು.

ಡಾ. ಕೃಷ್ಣಾನಂದ ಶೆಟ್ಟಿ
ತಾಲೂಕು ಆರೋಗ್ಯಾಧಿಕಾರಿ



































































































































error: Content is protected !!
Scroll to Top