ದಿಲ್ಲಿ, ಸೆ. 18:ಕೇಂದ್ರ ಸರಕಾರ ಜಾರಿಗೆ ತರಲುದ್ದೇಶಿಸಿರುವ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಇತರ ವಿಪಕ್ಷಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಈ ಕುರಿತು ಬೇರೆ ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿ ರೈತರು ಮತ್ತು ದೇಶವನ್ನು ತಪ್ಪು ದಾರಿಗೆಳೆಯಬಾರದು. ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮತ್ತು ಚೀನ ನಮ್ಮ ಕತ್ತು ಒತ್ತಿಹಿಡಿದಿರುವ ಸಂದರ್ಭದಲ್ಲಿ ಪ್ರಧಾನಿ ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಸುರೆವಾಲಾ ಆರೋಪಿಸಿದ್ದಾರೆ

ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಸರಕಾರ ಹೇಳುತ್ತಿದೆ. ಶೇ.86.2 ರೈತರು ಆರು ಎಕ್ಕರೆಗಿಂತ ಕಡಿಮೆ ಮತ್ತು ಶೇ.60 ರೈತರು ಎರಡು ಎಕ್ಕರೆಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇಂಥ ಬಡ ರೈತರು ಎಲ್ಲೋ ದೂರದಲ್ಲಿರುವ ಮಾರುಕಟ್ಟೆಗೆ ಹೋಗಿ ತಮ್ಮ ಉತ್ಪನ್ನಗಳನ್ನು ಮಾರುವುದು ಹೇಗೆ ಸಾಧ್ಯ? ಕಾರ್ಪೋರೇಟ್ ಕುಳಗಳ ಜೊತೆಗೆ ಹೋರಾಡುವ ಸಾಮರ್ಥ್ಯ ರೈತರಿಗಿದೆಯೇ? ಈ ಮಸೂದೆಗಳು ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ವನಾಶ ಮಾಡಲಿವೆ ಎಂದಿದ್ದಾರೆ ಸುರ್ಜೆವಾಲಾ.






























































