ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆ. 25ರಂದು ವಿಕಾಸ ಸೇವಾ ಕಚೇರಿ ಸಭಾಂಗಣದಲ್ಲಿ ಜರಗಿತು. ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಹೆಬ್ರಿ ತಾಲೂಕನ್ನು ಒಳಗೊಂಡ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ವಿಫುಲವಾದ ಅವಕಾಶಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗಾಗಿ ಲಭ್ಯವಿರುವ ಸಕಲ ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಪ್ರಾಮಾಣಿಕತೆ ಮಾಡಬೇಕಾಗಿದೆ. ಉದ್ಯಮ ಕ್ಷೇತ್ರದಲ್ಲಿ ಬೇರೆ ಬೇರೆ ಕಾರಣಗಳಿಂದ ಸಂಕಷ್ಟದ ಪರಿಸ್ಥಿತಿಯಿರುವ ಪ್ರಸ್ತುತ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವುದು ಉತ್ತಮವೆಂದರು.
ರೈತಮೋರ್ಚಾದ ಪದಾಧಿಕಾರಿಗಳು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಪಕ್ಷ ಸಂಘಟನೆಗೆ ಪೂರಕವಾದ ಕೆಲಸ ನಿರ್ವಹಿಸಬೇಕಾಗಿದೆ. ಭತ್ತದ ಕಜೆ ಜಯ ತಳಿ ಮತ್ತು ಬಿಳಿ ಬೆಂಡೆ ತರಕಾರಿಯನ್ನು ಕಾರ್ಕಳ “ಬ್ರಾಂಡ್” ಕೃಷಿ ಉತ್ಪನ್ನಗಳಾಗಿ ಬಿಂಬಿಸಲು ಇಲಾಖೆಯೊಂದಿಗೆ ಸಹಕಾರ ನೀಡುವಂತೆ ವಿನಂತಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಪಕ್ಷದ ಸಿದ್ದಾಂತದಂತೆ ರೈತ ಮೋರ್ಚಾ ಕ್ಷೇತ್ರ ಸಮಿತಿ ಮತ್ತು ಶಕ್ತಿಕೇಂದ್ರ ಪದಾಧಿಕಾರಿಗಳ ಆಯ್ಕೆಯ ರೀತಿಯಲ್ಲಿಯೇ ಗ್ರಾಮೀಣ ಮಟ್ಟದಲ್ಲಿ ರೈತ ಸಂಘಟನೆಯನ್ನು ಬಲವರ್ಧನೆಗೊಳಿಸಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಕರ್ತವ್ಯವಾಗಿರಬೇಕು. ಬಡ ರೈತರಿಗೂ ಸ್ವಾವಲಂಬಿ ಜೀವನ ಮತ್ತು ಸಾಮಾಜಿಕವಾಗಿ ಗೌರವ ತರುವ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿದಾಗ ಪಕ್ಷಕ್ಕೆ ಬಲ ತುಂಬಿದಂತಾಗುತ್ತದೆ ಎಂದರು.
ರೈತಾ ಮೋರ್ಚಾ ನೂತನ ಅಧ್ಯಕ್ಷ ಹೆಬ್ರಿ ಜಯಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕಾಂಚನ್, ಧೀರಜ್ ಕೆ.ಎಸ್., ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಣಿರಾಜ ಶೆಟ್ಟಿ, ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಜಯರಾಮ ಸಾಲ್ಯಾನ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಸುರೇಂದ್ರ ಬೋಂಟ್ರ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್ ಪ್ರಸ್ತಾವನೆಗೈದು, ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಸ್ವಾಗತಿಸಿ ನಿರೂಪಿಸಿದರು. ಪ್ರವೀಣ್ ಸೂಡ ವಂದಿಸಿದರು.
























