ದಿಲ್ಲಿ, ಆ. 23: ಕೊನೆಗೂ ಕಾಂಗ್ರೆಸಿನವರಿಗೆ ಜ್ಞಾನೋದಯವಾದಂತೆ ಕಾಣಿಸುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಸಮಗ್ರವಾದ ಕಾಯಕಲ್ಪ ಕೊಡುವ ಅಗತ್ಯವನ್ನು ಅವರು ಕೊನೆಗಾದರೂ ಮನಗಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ, ಪೃಥ್ವಿರಾಜ್ ಚವಾಣ್, ಮಾಜಿ ಸಚಿವರಾದ ಕಪಿಲ್ ಸಿಬಲ್, ಶಶಿ ತರೂರು ಸೇರಿ ಹಲವು ಹಿರಿತಲೆಗಳು ಕಾಂಗ್ರೆಸ್ ಬದಲಾಗಬೇಕೆಂದು ಆಗ್ರಹಿಸಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮಿಲಿಂದ್ ದೇವ್ರಾ ಅವರಂಥ ಯುವ ನಾಯಕರೂ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಒಟ್ಟು 23 ನಾಯಕರು ಸಹಿ ಇರುವ ಈ ಪತ್ರದಲ್ಲಿ ಪಕ್ಷಕ್ಕೆ ದೃಷ್ಟಿಗೋಚರ , ಸಕ್ರಿಯವಾಗಿ ಕೆಲಸ ಮಾಡುವ ಪೂರ್ಣ ಪ್ರಮಾಣದ ಪರಿಣಾಮಕಾರಿ ನಾಯಕತ್ವದ ಅಗತ್ಯ ಇದೆ ಎಂಬ ಅಂಶವನ್ನು ಪ್ರತಿಪಾದಿಸಲಾಗಿದೆ.
ತುರ್ತಾಗಿ ಪಕ್ಷವನ್ನು ಸಾಂಘಿಕವಾಗಿ ಮುನ್ನಡೆಸುವ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಅಗತ್ಯವಿದೆ. ಪಕ್ಷದ ಪುನರುತ್ಥಾನ ಆದ್ಯತೆಯಲ್ಲಿ ಆಗಬೇಕಾದ ಕೆಲಸ ಎಂದು ನಾಯಕರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ರಾಜ್ಯಸಭೆಯ ಮಾಜಿ ಸದಸ್ಯ ಪಿ.ಜೆ.ಕುರಿಯನ್ ಕಾಂಗ್ರೆಸ್ ಅಧ್ಯಕ್ಷೆಗೆ ಹಿರಿಯ ನಾಯಕರು ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.
ಸೋಮವಾರ ಕಾಂಗೆಸ್ಸಿನ ಕಾರ್ಯಕಾರಿ ಸಭೆ ನಡೆಯಲಿದ್ದು, ಇದಕ್ಕೂ ಮುಂಚಿತವಾಗಿ ಕಾಂಗ್ರೆಸ್ ನಾಯಕರು ಪತ್ರ ಬರೆದಿರುವುದು ಕುತೂಹಲ ಕೆರಳಿಸಿದೆ. ಸೋಮವಾರದ ಸಭೆಯಲ್ಲಿ ಈ ಪತ್ರ ಚರ್ಚೆಗೆ ಬರುವ ಸಾಧ್ಯತೆಯಿದೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಸಂಜಯ್ ಝಾ ಈ ಪತ್ರದ ಬಗ್ಗೆ ಮಾತನಾಡಿದಾಗ ವಕ್ತಾರ ರಣದೀಪ್ ಸುರ್ಜೆವಾಲಾ ಅಲ್ಲಗಳೆದಿದ್ದರು.






































































