ಇರಲಿ ರಾಜಕಾರಣಿಗಳಿಗೂ ಒಂದು ಪರೀಕ್ಷೆ

0

ಇದನ್ನು ಓದಿದವರು ಒಳ್ಳೆಯ ಜೋಕ್ ಕೇಳಿದಂತೆ ನಗಬಹುದು. ಏಕೆಂದರೆ ಒಂದು ವೇಳೆ ತಿರುಕನ ಕನಸು ನಿಜವಾದರೂ ಆಗಬಹುದು, ಆದರೆ ಇದು ಮಾತ್ರ ಎಂದಿಗೂ ನನಸಾಗಲಾಗದ ಕನಸು. ಅದೇನನ್ನುತ್ತೀರಾ, ನೋಡಿ:
ಸರಕಾರಿ ಉದ್ಯೋಗವಿರಲಿ, ಖಾಸಗಿ ಉದ್ಯೋಗವಿರಲಿ, ಪ್ರತಿಯೊಂದು ಹುದ್ದೆಗೂ ನಿರ್ದಿಷ್ಟ ವಿದ್ಯಾರ್ಹತೆಯ ಅಗತ್ಯವಿದೆ. ದೈಹಿಕವಾಗಿ ಅರ್ಹತೆಯಿರಬೇಕು. ಸರಕಾರದ ಯಾವುದೇ ಕಚೇರಿಯಲ್ಲಿ ಜವಾನ ಹುದ್ದೆಗಾಗಲೀ ಅಷ್ಟೇಕೆ ಕಾವಲುಗಾರ ಹುದ್ದೆಗೂ ಕನಿಷ್ಟ ಹತ್ತನೆ ತರಗತಿ ತೇರ್ಗಡೆಯಾಗಿರಬೇಕು.
ಸರಕಾರಿ ಉದ್ಯೋಗಕ್ಕೆ ಕೇವಲ ವಿದ್ಯಾರ್ಹತೆ ಮಾತ್ರ ಸಾಲದು, ಸ್ಪರ್ಧಾತ್ಮಕ ಪರೀಕ್ಷೆ, ಬಳಿಕ (ಸೈನಿಕರ ಮತ್ತು ಪೋಲಿಸ್ ಹುದ್ದೆಗೆ ದೈಹಿಕ ಪರೀಕ್ಷೆ) ವೈದ್ಯಕೀಯ ಪರೀಕ್ಷೆಯೂ, ಎಲ್ಲಾ ಹುದ್ದೆಗಳಿಗೆ ಸರಕಾರಿ ವೈದ್ಯರಿಂದ, ಪತ್ರಾಂಕಿತ ಹುದ್ದೆಗೆ ವೈದ್ಯಕೀಯ ಮಂಡಳಿಯಿಂದ ದೈಹಿಕ ಅರ್ಹತಾ ಪರೀಕ್ಷೆ ಮುಂತಾದ ಹಂತಗಳಲ್ಲಿ ಯಶಸ್ವಿಯಾಗಬೇಕು.

ವೈದ್ಯರಾಗಬೇಕಾದರೆ, ನ್ಯಾಯವಾದಿಯಾಗಬೇಕಾದರೆ ಇನ್ಯಾವುದೇ ಹುದ್ದೆಗೆ ನಿರ್ದಿಷ್ಟ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಆಡಳಿತಾತ್ಮಕ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಹುದ್ದೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು.ಇಷ್ಟು ಮಾತ್ರವಲ್ಲದೆ ಉದ್ಯೊಗಕ್ಕೆ ಸೇರಿದ ನಂತರವೂ ಇನ್ನೂ ಕೆಲವು ಪರೀಕ್ಷೆಗಳನ್ನು ಬರೆದು ತೇರ್ಗಡೆ ಹೊಂದದಿದ್ದರೆ ವಾರ್ಷಿಕ ವೇತನ ಬಡ್ತಿಯಾಗಲಿ ಪದೋನ್ನತಿಯಾಗಲಿ ಸಿಗುವುದಿಲ್ಲ.  ಖಾಸಗಿ ಸಂಸ್ಥೆಗಳಲ್ಲಿ, ಬಹು ರಾಷ್ಟ್ರೀಯ ಕಂಪೆನಿಗಳಲ್ಲೂ ಹತ್ತು ಹಲವು ಮಜಲುಗಳನ್ನು ದಾಟಬೇಕು. ಅರ್ಹತೆ ಪಡೆದು ಆಯ್ಕೆಯಾದರೂ, ತರಬೇತಿ ಅವಧಿಯಲ್ಲಿ ಮತ್ತೊಮ್ಮೆ ಅವರ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುತ್ತಾರೆ. ಈ ಎಲ್ಲ ಅಗ್ನಿ ಪರೀಕ್ಷೆಗಳನ್ನು ಯಶಸ್ವಿಯಾಗಿ ದಾಟಿದರೆ ಮಾತ್ರ ಉದ್ಯೋಗ, ಪದೋನ್ನತಿ; ಇಲ್ಲವಾದರೆ ಇಲ್ಲ.
ಇನ್ನು ಪಿಂಚಣಿ ಮತ್ತು ನಿವೃತ್ತಿಯ ವಿಷಯಕ್ಕೆ ಬಂದರೆ ಸರ್ಕಾರದ ಅಥವಾ ಖಾಸಗಿ ಸಂಸ್ಥೆಗಳ ಹುದ್ದೆಗೆ ಗರಿಷ್ಠ ವಯೋಮಿತಿ ಇದೆ. ಪಿಂಚಣಿ ಸಿಗುವ ಹುದ್ದೆಗಳಲ್ಲಿ ಪಿಂಚಣಿ ಸಿಗಬೇಕಾದರೆ ಕನಿಷ್ಟ ಅವಧಿಯ ಸೇವೆ ಸಲ್ಲಿಸಿರಲೇ ಬೇಕು.

ಆದರೆ, ರಾಜಕಾರಣಿಗಳು ಒಂದೇ ಒಂದು ಅವಧಿಯಲ್ಲಿ ಶಾಸಕರೋ, ಸಂಸತ್ಸದಸ್ಯರೋ ಆದರೆ ಸಾಕು ಪಿಂಚಣಿಗೆ ಅರ್ಹರಾಗುತ್ತಾರೆ. ಅಲ್ಲದೆ, (ಸೇನೆಯಲ್ಲಿ ಸೇವೆ ಸಲ್ಲಿಸಿ ನಾಗರಿಕ ಸೇವೆಗೆ ಸೇರಿದವರನ್ನು ಹೊರತುಪಡಿಸಿ ಇನ್ಯಾರೂ ಏಕಕಾಲದಲ್ಲಿ ಎರಡು ಪಿಂಚಣಿ ಪಡೆಯುವಂತಿಲ್ಲ) ಓರ್ವ ವಿಧಾನಸಭಾ ಸದಸ್ಯರು ಸಂಸತ್ಸದಸ್ಯರಾದರೆ ಎರಡಕ್ಕೂ ಪ್ರತ್ಯೇಕ ಪಿಂಚಣಿ ಸಿಗುತ್ತದೆ. ಸರಕಾರಿ ನೌಕರ ಅಥವಾ ಅಧಿಕಾರಿ ಸ್ವಯಂ ನಿವೃತ್ತಿ ಪಡೆದರೆ ಪುನಃ ಸರಕಾರಿ ಉದ್ಯೋಗಕ್ಕೆ ಸೇರುವಂತಿಲ್ಲ. ರಾಜಕಾರಣಿಗಳು ಎಷ್ಟು ಸಲ ಬೇಕಾದರೂ ಸ್ಪರ್ಧಿಸಬಹುದು, ವಿಧಾನಪರಿಷತ್ ಅಥವಾ ರಾಜ್ಯಸಭೆಗೆ ನಾಮ ನಿರ್ದೇಶನದ ಮೇಲೆ ಎಷ್ಟು ಅವಧಿಗೂ “ಸೇವೆ” ಸಲ್ಲಿಸಬಹುದು. ಒಮ್ಮೆ ಆಯ್ಕೆಯಾಗಿ ಅವಧಿಗೂ ಮೊದಲು ರಾಜೀನಾಮೆ ಕೊಟ್ಟರೂ ಮತ್ತೊಮ್ಮೆ ಸ್ಪರ್ಧೆ ಮಾಡಬಹುದು!
ಬ್ಯಾಂಕ್ ಅಥವಾ ಸರಕಾರದ ಉದ್ಯೋಗದಲ್ಲಿ ಇರುವವರು ಸೇವೆಯಲ್ಲಿರುವಾಗಲೇ ಮರಣ ಹೊಂದಿದರೆ, ಅವರ ಅವಲಂಬಿತರಿಗೆ ಉದ್ಯೋಗ ಸಿಗಬೇಕಾದರೆ ನಿಗದಿತ ವಿದ್ಯಾರ್ಹತೆ ಇರಲೇ ಬೇಕು. ಒಂದು ವೇಳೆ ಮೃತಪಟ್ಟ ಉದ್ಯೋಗಿಯ ಮಕ್ಕಳು ಹಾಗೆ ಮರಣಹೊಂದಿದ ಒಂದು ವರ್ಷದೊಳಗೆ ಉದ್ಯೋಗಕ್ಕೆ ಅರ್ಹತೆ ಪಡೆಯದಿದ್ದರೆ ಅವಕಾಶ ಕಳೆದುಕೊಳ್ಳುತ್ತಾರೆ. ಇದು ನ್ಯಾಯಾಂಗ ಮತ್ತು ಕಾರ್ಯಾಂಗ ಎರಡಕ್ಕೂ ಅನ್ವಯ. ಆದರೆ ಶಾಸಕಾಂಗ ಇದೆಲ್ಲದಕ್ಕೂ ಅತೀತವಾಗಿದೆ! ನೌಕರರು ಮೃತಪಟ್ಟರೆ ಅನುಕಂಪದ ನೆಲೆಯಲ್ಲಿ ಉದ್ಯೋಗಕ್ಕೆ ನೂರಾರು ಶರತ್ತು ವಿಧಿಸಿದರೆ, ರಾಜಕಾರಣಿಗಳು ಮೃತಪಟ್ಟರೆ, “ಅನುಕಂಪದ ಅಲೆಯ” ಪ್ರಯೋಜನ ಪಡೆಯಲು ಅವರ ಉತ್ತರಾಧಿಕಾರಿಯನ್ನು ಯಾವ ವಿಳಂಬವೂ ಇಲ್ಲದೆ ಸಿದ್ಧಪಡಿಸಿಡುತ್ತಾರೆ! ಸರಕಾರಿ ಉದ್ಯೋಗಿಗಳಿಗೆ ವಯಸ್ಸಾದಂತೆ ಕೆಲಸ ಮಾಡುವ ಶಕ್ತಿ ಕಡಿಮೆಯಾಗುತ್ತದೆಂಬ ಕಾರಣಕ್ಕೆ ನಿವೃತ್ತಿ ನೀಡಲಾಗುತ್ತದೆ. ಆದರೆ ರಾಜಕಾರಣಿಗಳು ವಯಸ್ಸು ಕಳೆದಂತೆಲ್ಲಾ ಯುವಕರಾಗುತ್ತಾರೇನೋ ಎಂಬಂತೆ ಸರಿಯಾಗಿ ಹೆಜ್ಜೆ ಹಾಕಲು ಅಸಮರ್ಥರಾಗುವ ಹಂತಕ್ಕೆ ತಲುಪಿದರೂ, ಅವರಿಗೆ ಅಧಿಕಾರ ಬೇಕು, ನಿವೃತ್ತಿ ಎಂಬುದು ಭಾಷಣಕ್ಕೆ ಮಾತ್ರ ಸೀಮಿತ.
ನೌಕರರಿಲಿ, ಅಧಿಕಾರಿಗಳಿರಲಿ, ಚಿಕ್ಕ ಹುದ್ದೆಯಿಂದ ಉನ್ನತ ಅಥವಾ ಆಡಳಿತಾತ್ಮಕ ಹುದ್ದೆಗಳಿಗೆ ಆಯ್ಕೆಯಾಗಲು, ಪದೋನ್ನತಿ ಪಡೆಯಲು ಕಠಿಣ ಮಜಲುಗಳನ್ನು ದಾಟಿ ಬರಬೇಕು. ಹೀಗಿರುವಾಗ ಅವರೆಲ್ಲರನ್ನೂ ಬುಗುರಿಯಂತೆ ಆಡಿಸುವ ರಾಜಕಾರಣಿಗಳಿಗೆ, ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ, ಶಾಸಕರಿಗೆ, ಸಂಸತ್ಸದಸ್ಯರಿಗೆ, ಹಾಗೂ ಬೇರೆ ಬೇರೆ ದರ್ಜೆಯ ಸಚಿವರಿಗೂ ಪರೀಕ್ಷೆ ನಿಗದಿಪಡಿಸುವ ಅಗತ್ಯವಿದೆಯೆಂದು ಅನಿಸುವುದಿಲ್ಲವೇ? ಪ್ರತಿಯೊಂದು ಹಂತದಲ್ಲಿ ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಪರೀಕ್ಷೆ ನಿಗದಿಪಡಿಸಿ, ಅಂತಹ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ  ಮಾತ್ರ ಸ್ಪರ್ಧಿಸಲು ಅರ್ಹತೆ ನಿಯಮವಿದ್ದರೆ? ಈ “ತಿರುಕನ ಕನಸು” ನನಸಾಗುವ ಕಾಲ ಬರಬಹುದೇ?

ಮೋಹನದಾಸ ಕಿಣಿ, ಕಾಪು (8792883636)
kini.mohandas@gmail.com---
Previous articleಪೂರ್ಣಿಮಾ ಸಿಲ್ಕ್ಸ್‌ ವತಿಯಿಂದ ವಸ್ತ್ರ ದಾನ
Next articleಸೆಪ್ಟೆಂಬರ್‌ನಲ್ಲಿ ಶಾಲೆಗಳನ್ನು ತೆರೆಯಲು ಮಾರ್ಗಸೂಚಿ ಸಿದ್ಧ

LEAVE A REPLY

Please enter your comment!
Please enter your name here