ಕಾರ್ಕಳ: ನಗರದ ಜೋಡು ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಿಮಾ ಸಿಲ್ಕ್ಸ್ ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂಥಹ ಡ್ರೆಸ್ ಲಭ್ಯವಿದ್ದು, ಬಗೆ ಬಗೆಯ ವಿನ್ಯಾಸ, ಉತ್ತಮ ಸೇವೆ ಗ್ರಾಹಕರನ್ನು ಮಳಿಗೆಯತ್ತ ಮತ್ತೆ ಆಕರ್ಷಿಸುತ್ತಿದೆ ಎಂದು ಪುರಸಭಾ ಸದಸ್ಯ, ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಪಕ್ ಅಹಮ್ಮದ್ ಅಭಿಪ್ರಾಯಪಟ್ಟರು.
ಅವರು ಆ. 15ರಂದು ಸ್ವಾತಂತ್ರ್ಯೋತ್ಸವದಂದವಾಗಿ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ನಡೆದ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣಿಮಾ ಸಿಲ್ಕ್ಸ್ ಸಂಸ್ಥಾಪಕ ಪಾಂಡುರಂಗ ಪ್ರಭು ಅಂದಿನ ಕಾಲದಲ್ಲೇ ಸರ್ವ ಸಮುದಾಯದ ಬಡವರಿಗೆ ವಿದ್ಯಾದಾನ, ವಸ್ತ್ರದಾನ ಮಾಡುತ್ತಿದ್ದರು. ಆ ಮೂಲಕ ಸಂಸ್ಥೆಯ ಒಂದಷ್ಟು ಲಾಭಾಂಶವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದರು. ಈ ಕಾರ್ಯವನ್ನು ರವಿಪ್ರಕಾಶ್ ಪ್ರಭು ದಂಪತಿ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ವಿಚಾರವೆಂದರು.
ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ನಾಸೀರ್ ಹುಸೇನ್ ಮಾತನಾಡಿ, ಪೂರ್ಣಿಮಾ ಸಂಸ್ಥೆಯು 74ನೇ ಸ್ವಾತಂತ್ರ್ಯೋತ್ಸದ ಪ್ರಯುಕ್ತ 74 ಮಂದಿಗೆ ಬಟ್ಟೆ ವಿತರಣೆ ಮಾಡಿರುವುದು ಅಭಿನಂದನೀಯ. ಕೊರೊನಾ ಸಂದರ್ಭದಲ್ಲೂ ಅಗತ್ಯವುಳ್ಳವರಿಗೆ ಸಂಸ್ಥೆ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಿರುವುದು ಸಮಾಜ ಮುಖಿ ಕಾರ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಪೂರ್ಣಿಮಾ ಸಿಲ್ಕ್ಸ್ ಮಾಲಕ ಕೆ. ರವಿಪ್ರಕಾಶ್ ಪ್ರಭು ಮಾತನಾಡಿ, ಬಡಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸಂಸ್ಥೆ ವತಿಯಿಂದ ಸಾಮಾಜಿಕ ಕಾರ್ಯ ಕೈಗೊಳ್ಳಲು ಗ್ರಾಹಕ ಬಂಧುಗಳ ಆಶೀರ್ವಾದವೇ ಕಾರಣವೆಂದರು.
ಪೂರ್ಣಿಮಾ ಸಮೂಹ ಸಂಸ್ಥೆಗಳ ಹಿರಿಯರಾದ ಕೆ. ಉಮಾನಾಥ ಪ್ರಭು ಶುಭ ಹಾರೈಸಿದರು. ಪೂರ್ಣಿಮೋತ್ಸವ 2020 ಉಡುಗೊರೆಗಳನ್ನು ಕಾರ್ಕಳ ಶ್ರೀಮದ್ ಭುವನೇಂದ್ರ ಶಾಲಾ ಸಂಚಾಲಕ, ಉದ್ಯಮಿ ಎಸ್. ನಿತ್ಯಾನಂದ ಪೈ ಬಿಡುಗಡೆಗೊಳಿಸಿದರು. ಸಂಸ್ಥೆಯ ಪಾಲುದಾರ ಕಿರಣ ರವಿಪ್ರಕಾಶ್ ಪ್ರಭು ವಂದಿಸಿದರು. ಶಿವ ಎಡ್ವಟೈಸರ್ಸ್ ಮಾಲಕ ಆರ್. ವರದರಾಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಎಲ್ಲ ಸಿಬಂದಿ ತ್ರಿವರ್ಣದ ಸಮವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.