ದಿಲ್ಲಿ, ಆ. 18: ಕೊರೊನಾ ಸಂಕಷ್ಟದ ಪರಿಸ್ಥಿತಿ ನಿರ್ವಹಣೆಗೆ ಪಿಎಂ ಕೇರ್ಸ್ ನಿಧಿಯಲ್ಲಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್ ಡಿಆರ್ ಎಫ್)ಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಿಎಂ ಕೇರ್ಸ್ ಫಂಡ್ ನಲ್ಲಿ ಸಂಗ್ರಹವಾದ ಹಣವನ್ನು ಎನ್ ಡಿಆರ್ ಎಫ್ ಗೆ ವರ್ಗಾಯಿಸಬೇಕೆಂದು ಕೋರಿ ಸರ್ಕಾರೇತರ ಸಂಘಟನೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೊಳಪಡಿಸಿ ನ್ಯಾಯಾಲಯ ಇಂದು ಈ ತೀರ್ಪು ನೀಡಿದೆ.
ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣ ಸಂಪೂರ್ಣವಾಗಿ ಚಾರಿಟೇಬಲ್ ಟ್ರಸ್ಟ್ ನ ಹಣ, ಇದಕ್ಕೂ ಎನ್ ಡಿಆರ್ ಎಫ್ ಗೂ ಸಂಬಂಧವಿಲ್ಲ ಎಂದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ಯಾರು ಬೇಕಾದರೂ ಯಾವಾಗ ಬೇಕಾದರೂ ಸ್ವ ಇಚ್ಛೆಯಿಂದ ದಾನ ಮಾಡಬಹುದು. ಆದರೆ ಪಿಎಂ ಕೇರ್ಸ್ ಫಂಡ್ ಕೇವಲ ಕೊರೊನಾ ವಿಪತ್ತಿಗೆ ಸಂಬಂಧಿಸಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುದರ್ಶನ್ ರೆಡ್ಡಿ ಮತ್ತು ಎಂ. ಆರ್. ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ತೀರ್ಪು ನೀಡಿದೆ.
ಕೊರೊನಾ ಸಂಕಷ್ಟ ಬಂದ ಮೇಲೆ ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಲು ಕಳೆದ ಮಾರ್ಚ್ 28ರಂದು ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಹಾರ(ಪಿಎಂ ಕೇರ್ಸ್) ನಿಧಿಯನ್ನು ಸ್ಥಾಪಿಸಿತ್ತು. ಪ್ರಧಾನ ಮಂತ್ರಿಗಳು ಅದಕ್ಕೆ ಅಧ್ಯಕ್ಷರಾಗಿದ್ದು ರಕ್ಷಣೆ, ಗೃಹ ಮತ್ತು ಹಣಕಾಸು ಇಲಾಖೆ ಸಚಿವರು ಟ್ರಸ್ಟಿಗಳಾಗಿದ್ದಾರೆ.