ಬಿಜೆಪಿ ನಿಯಂತ್ರಣದಲ್ಲಿ ಫೇಸ್‌ ಬುಕ್‌, ವಾಟ್ಸಪ್‌ : ತೀವ್ರಗೊಂಡ ವಿವಾದ

ದಿಲ್ಲಿ, ಆ. 18: ಸಾಮಾಜಿಕ ಮಾಧ್ಯಮಗಳಾದ ಫೇಸ್‌ ಬುಕ್‌ ಮತ್ತು ವಾಟ್ಸಪ್‌ ಭಾರತದ ರಾಜಕೀಯದಲ್ಲಿ ಮೂಗುತೂರಿಸುತ್ತಿದೆ ಎಂಬ ಆರೋಪ ಈಗ ಹೊಸ ಆಯಾಮದತ್ತ ಹೊರಳಿಕೊಂಡಿದೆ.

ಬಿಜೆಪಿ ನಾಯಕರ ದ್ವೇಷದ ಭಾಷಣಗಳು ಮತ್ತು ಹೇಳಿಕೆಗಳ ವಿರುದ್ಧ ವಾಟ್ಸಪ್‌ ಮತ್ತು ಫೇಸ್‌ ಬುಕ್‌ ಕ್ರಮ ಕೈಗೊಳ್ಳುತ್ತಿಲ್ಲ.

ಸರಕಾರದ ಕೃಪಾಕಟಾಕ್ಷಕ್ಕಾಗಿ ಫೇಸ್ ಬುಕ್‌ ಮತ್ತು ವಾಟ್ಸಪ್‌ ಮೃದು ಧೋರಣೆ ಅನುಸರಿಸುತ್ತಿವೆ ಎಂದು ಎರಡು ದಿನದ ಹಿಂದೆ ಕಾಂಗ್ರೆಸ್‌ ಆರೋಪಿಸುವುದರೊಂದಿಗೆ ಈ ವಿವಾದ ಶುರುವಾಗಿದೆ.

ಬಿಜೆಪಿ ಫೇಸ್‌ ಬುಕ್‌ ಮತ್ತು ವಾಟ್ಸಪ್‌ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇರವಾಗಿಯೇ ಆರೋಪ ಮಾಡಿದ್ದರು.

ಅಮೆರಿಕದ ಜನಪ್ರಿಯ ಪತ್ರಿಕೆ ವಾಲ್‌ ಸ್ಟ್ರೀಟ್ ಜರ್ನಲ್‌ ಫೇಸ್‌ ಬುಕ್‌ ಭಾರತದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ದ್ವೇಷದ ಭಾಷಣಗಳನ್ನು ಮತ್ತು ಮುಸ್ಲಿಮ್‌  ವಿರೋಧಿ ಹೇಳಿಕೆಗಳನ್ನು ನಿರ್ಲಕ್ಷಿಸುವ ಮೂಲಕ ಫೇಸ್‌ ಬುಕ್‌  ಮೃದು ಧೋರಣೆ ಅನುಸರಿಸುತ್ತಿದೆ ಎಂಬುದಾಗಿ ಹೇಳಿರುವುದು ಕಾಂಗ್ರೆಸ್‌ ಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ.

ಈ ವರದಿ ಪ್ರಕಟವಾದ ಬೆನ್ನಿಗೆ ಕಾಂಗ್ರೆಸ್‌ ಸಂಸದ ಶಶಿ ತರೂರು ತನ್ನ ನೇತೃತ್ವದ ಮಾಹಿತಿ ತಂತ್ರಜ್ಞಾನ ಮೇಲಣ ಸಂಸದೀಯ  ಸ್ಥಾಯಿ ಸಮಿತಿ ಎದುರು ಹಾಜರಾಗಬೇಕೆಂದು ಫೇಸ್‌ ಬುಕ್‌ ಸಂಸ್ಥೆಯ ಭಾರತೀಯ ಮುಖ್ಯಸ್ಥರಿಗೆ ನೊಟೀಸ್‌ ಜಾರಿಗೊಳಿಸಿರುವುದು ಈಗ ವಿವಾದಕ್ಕೆಡೆಯಾಗಿದೆ.

ತರೂರು ಪದಚ್ಯುತಿಗೆ ಒತ್ತಡ  

ತರೂರು ಈ ನಡೆಗೆ ವಿರುದ್ಧವಾಗಿ ಅವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷ ಹುದ್ದೆಯಿಂದಲೇ ತೊಲಗಿಸಲು ಬಿಜೆಪಿ ಮುಂದಾಗಿದೆ. ಶಶಿ ತರೂರು ಸಂಸದೀಯ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್‌ ಪಕ್ಷದ ವಿಸ್ತರಿತ ಅಂಗವೆಂದು ಭಾವಿಸಿಕೊಂಡಿದ್ದಾರೆ. ಸ್ಥಾಯಿ ಸಮಿತಿ ಸಂಸತ್ತಿನ ಅಂಗವೇ ಹೊರತು ಕಾಂಗ್ರೆಸ್‌ ನ ಅಂಗ ಅಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಬಿಜೆಪಿ ನಾಯಕ ನಿಶಿಕಾಂತ್‌  ದುಬೆ ತರೂರು ನಡೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

31 ಸದಸ್ಯರಿರುವ ಸ್ಥಾಯಿ ಸಮಿತಿಯಲ್ಲಿ 17ಸದಸ್ಯರು ಎನ್ ಡಿಎಯವರು. ತರೂರು ಸಂಸದೀಯ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಎನ್‌ ಡಿಎ ಸದಸ್ಯರು ಅವರ ಉಚ್ಚಾಟನೆಗೆ ಪಟ್ಟು ಹಿಡಿದಿದ್ದಾರೆ.









































































































error: Content is protected !!
Scroll to Top