ಇಂದಿನ ಐಕಾನ್- ಭಾರತೀಯ ಕ್ರಿಕೆಟಿನ ಕೋಲ್ಮಿಂಚು ಎಂ. ಎಸ್. ಧೋನಿ

0

ಕ್ಯಾಪ್ಟನ್ ಕೂಲ್, ಜಗತ್ತಿನ ಬೆಸ್ಟ್ ಫಿನಿಶರ್, ಮಿಂಚಿನ ಸ್ಟಂಪರ್, ಮಿಡಲ್ ಆರ್ಡರ್ ಆಧಾರ ಸ್ಥಂಭ, ಭಾರತಕ್ಕೆ ಮೂರು ವಿಶ್ವ ಮಟ್ಟದ ಟ್ರೋಫಿ ತಂದುಕೊಟ್ಟ ಕ್ಯಾಪ್ಟನ್, ಭಾರತದ ಅತಿ ಶ್ರೇಷ್ಠ  ಮೂವರು ಕ್ಯಾಪ್ಟನಗಳಲ್ಲಿ ಒಬ್ಬರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸತತವಾಗಿ ಗೆಲ್ಲಿಸಿದ ಕ್ಯಾಪ್ಟನ್, ವಿಕೆಟ್ ನಡುವಿನ  ಚಿರತೆ…ಹೀಗೆಂದು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಹೆಮ್ಮೆಯಿಂದ ಮತ್ತು ಪ್ರೀತಿಯಿಂದ  ಗುರುತಿಸಿಕೊಂಡಿದ್ದ

ಎಂ. ಎಸ್. ಧೋನಿ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದ್ದಾರೆ. ಕಳೆದ 15 ವರ್ಷಗಳಿಂದ ಭಾರತೀಯ ಕ್ರಿಕೆಟಿನ ಅನಿವಾರ್ಯ ಕ್ರಿಕೆಟರ್ ಆಗಿದ್ದ ಧೋನಿ ಇನ್ನು ವಿಶ್ವ ಕ್ರಿಕೆಟ್ ವಲಯದಲ್ಲಿ  ಆಡುವುದಿಲ್ಲ ಅನ್ನುವುದನ್ನು ನಂಬುವುದು ಕಷ್ಟವೇ! ಆದರೆ 39 ವರ್ಷದಲ್ಲಿ ಕೂಡ ಧೋನಿ ಮೊದಲಿನ ಹಾಗೆ ಆಡಬೇಕು ಅನ್ನುವುದು ಕೂಡ ಸರಿ ಅಲ್ಲ!

ನಾನಿಂದು ಅವರ ದಾಖಲೆಗಳ ಬಗ್ಗೆ ಏನೂ  ಮಾತಾಡುವುದಿಲ್ಲ. ಇಂದಿನ ಯುವ ಜನಾಂಗಕ್ಕೆ ಧೋನಿ ಬಗ್ಗೆ ವಿಸ್ತಾರವಾಗಿ ಹೇಳುವ ಆವಶ್ಯಕತೆ ಕೂಡ ಇಲ್ಲ. ಒಬ್ಬ ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದ, ಕ್ರಿಕೆಟಿನ ಗಂಧ ಗಾಳಿ ಇಲ್ಲದ ಜಾರ್ಖಂಡ್ ರಾಜ್ಯದಲ್ಲಿ ತನ್ನ ಬಾಲ್ಯವನ್ನು ಕಳೆದ, ಪದವಿ ಪೂರ್ತಿ ಮಾಡಲು ಸಾಧ್ಯವಾಗದೆ  ಖರಗಪುರ  ರೈಲ್ವೆಯಲ್ಲಿ ಟಿಕೆಟ್ ಪರಿವೀಕ್ಷಣೆ ಮಾಡುತ್ತಾ ಬೆಳೆದ ಧೋನಿ ಭಾರತದ ಕ್ರಿಕೆಟ್ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದರು. ಕಪಿಲ್ ದೇವ್, ಸೌರವ್ ಗಂಗೂಲಿ ಅವರ ಸಾಲಿನಲ್ಲಿ ನಿಲ್ಲಬಲ್ಲ ಒಬ್ಬ ಕ್ಯಾಪ್ಟನ್ ಇದ್ದರೆ ಅದು ಧೋನಿ ಮಾತ್ರ. 2007ರ ಚೊಚ್ಚಲ T20 ವಿಶ್ವಕಪ್, 2011ರ ಏಕದಿನ ವಿಶ್ವ ಕಪ್, 2013ರ ಚಾಂಪಿಯನ್ ಟ್ರೋಫಿ ಈ ಮೂರೂ ಐಸಿಸಿ ಕಪ್ ಗೆದ್ದ ಜಗತ್ತಿನ ಏಕೈಕ ಕ್ಯಾಪ್ಟನ್ ಧೋನಿ ಮತ್ತು ಧೋನಿ ಮಾತ್ರ! ಎರಡು ಬಾರಿ ಏಷ್ಯಾ ಕಪ್ಪನ್ನು  ಭಾರತಕ್ಕೆ ಗೆದ್ದು ಕೊಟ್ಟ ಕ್ಯಾಪ್ಟನ್ ಕೂಡ ಹೌದು! 2008ರಿಂದ ಇಂದಿನವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಪಿಲ್ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಇದೇ ಧೋನಿ! ಕ್ಯಾಪ್ಟನ್ ಆಗಿ ಇಷ್ಟೊಂದು ಯಶಸ್ಸನ್ನು ಸಂಪಾದಿಸಿದ ಮತ್ತೋರ್ವ ಕ್ರಿಕೆಟರ್ ಭಾರತದಲ್ಲಿ ಇಲ್ಲ! ಇದು ಧೋನಿ ಹೆಗ್ಗಳಿಕೆ.

ಅವರೇ ಸಂಶೋಧನೆ ಮಾಡಿದ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿ 2011ರ ವಿಶ್ವಕಪ್ಪನ್ನು ಗೆದ್ದ ಧೋನಿಯನ್ನು ಯುವಜನತೆ ಖಂಡಿತವಾಗಿ ಮರೆಯುವುದಿಲ್ಲ!

ಅವರ ನಾಯಕತ್ವದ ಯಶಸ್ಸಿಗೆ ಪ್ರಮುಖ ಕಾರಣ ಆದದ್ದು ಅವರ ಬೆಟ್ಟದಷ್ಟು ತಾಳ್ಮೆ, ಸರಿಯಾದ  ಸಂದರ್ಭದಲ್ಲಿ ಸರಿಯಾದ ನಿರ್ಧಾರಗಳು,ಎಳೆಯರನ್ನು  ಬೆಳೆಸುವ ಅವರ ದೊಡ್ಡ ಗುಣ ಮತ್ತು ಹೋರಾಟದ ಮನೋಭಾವ! ಏಕದಿನ ಪಂದ್ಯಗಳಲ್ಲಿ ನಂಬರ್ 6 ಆಟಗಾರನಾಗಿ ಕ್ರೀಸಿಗೆ ಬಂದು ಬಾಲಂಗೋಚಿ ಆಟಗಾರರ ನೆರವು ಪಡೆದು, ಕೊನೆಯವರೆಗೂ ನಿಂತು ಭಾರತವನ್ನು ಗೆಲ್ಲಿಸಿದ ನಿದರ್ಶನಗಳು ನೂರಾರು! ಒಂದು ಕಣ್ಣನ್ನು ಸ್ಕೋರ್ ಬೋರ್ಡಿನ ಮೇಲೆ ಇಟ್ಟು, ಅನನುಭವಿ ಆಟಗಾರರಿಗೆ ಧೈರ್ಯ ತುಂಬಿಸುತ್ತ, ವಿಕೆಟ್ ನಡುವೆ ಚಿರತೆಯ ಹಾಗೆ ಓಡುತ್ತಾ, ಒಂದೊಂದೇ ರನ್ ಪೇರಿಸಿ ಗೆಲುವಿನ ಕಡೆಗೆ ಧಾವಿಸುವ ಧೋನಿಗೆ ಸಮನಾದ ಮತ್ತೊಬ್ಬ ಆಟಗಾರ ಭಾರತದಲ್ಲಿ ಇಲ್ಲ! ಧೋನಿ ಕ್ರೀಸಲ್ಲಿ ಇದ್ದಷ್ಟೂ ಹೊತ್ತು ಭಾರತ ಮ್ಯಾಚ್ ಸೋಲುವುದಿಲ್ಲ ಎಂಬ ನಂಬಿಕೆ ಬಹು ವರ್ಷ ಚಾಲ್ತಿಯಲ್ಲಿ ಇತ್ತು.  ಜನ ಅವರಿಂದ ಅದನ್ನೇ ಬಯಸುತ್ತಿದ್ದರು. ಆದ್ದರಿಂದ ಅವರೊಬ್ಬ ಮ್ಯಾಚ್ ವಿನ್ನರ್!

ಅವರೊಬ್ಬ ಭಾರತದ ಅತೀ ಶ್ರೇಷ್ಟ ವಿಕೆಟ್ ಕೀಪರ್. ಅತೀ ಹೆಚ್ಚು ಸ್ಟಂಪಿಂಗ್ ವಿಶ್ವದಾಖಲೆ ಧೋನಿ ಹೆಸರಲ್ಲಿ ಇದೆ. ನಡು ವಯಸ್ಸಿನಲ್ಲೂ ಬೆನ್ನು ಬಗ್ಗಿಸಿ ವಿಕೆಟ್ ಹಿಂದೆ ದಿನ ಪೂರ್ತಿ ನಿಲ್ಲುವ ತಾಕತ್ತು ಅವರಲ್ಲಿ ಮಾತ್ರ ಇತ್ತು. ಎಡಭಾಗಕ್ಕೆ ನೆಗೆದು ಕ್ಲಿಷ್ಟ ಕ್ಯಾಚ್ ಪಡೆಯುವ ಶಕ್ತಿ ಧೋನಿ ಅವರಲ್ಲಿ ಇತ್ತು.  ವಿಕೆಟ್ ಹಿಂದೆ ಧೋನಿ ಇದ್ದರೆ ಬೌಲರ್‌ ಗಳಿಗೆ ಏನೋ ಒಂದು ಉತ್ಸಾಹ ಬರುತ್ತಿತ್ತು. ಧೋನಿ ಯಾವತ್ತೂ ಸಿಡುಕಿದ್ದು, ತಾಳ್ಮೆ ತಪ್ಪಿದ್ದು, ಎದುರಾಳಿ ಆಟಗಾರರ   ಕಾಲೆಳೆದದ್ದು, ಅಂಪೈರ್ ತೀರ್ಪನ್ನು ಪ್ರಶ್ನಿಸಿದ್ದು, ತನ್ನ ಆಟಗಾರರನ್ನು ಬೈದದ್ದು ನಾನಂತೂ ನೋಡಿಲ್ಲ! ಮ್ಯಾಚ್ ಗೆದ್ದಾಗ ಯಶಸ್ಸನ್ನು ತನ್ನ ಸಹ ಆಟಗಾರರಿಗೆ ಹಂಚುವ, ಸೋತಾಗ ತಾನೇ ಸೋಲಿನ ಹೊಣೆ ಹೊರುವ ಧೋನಿ ನಾಯಕತ್ವದ ನಿಜವಾದ  ರೋಲ್  ಮಾಡೆಲ್! ಅವರ ನೇತೃತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟಿನಲ್ಲಿ  ವಿಶ್ವ ರಾಂಕಿಂಗಲ್ಲಿ ಮೊದಲ ಸ್ಥಾನಕ್ಕೆ ಏರಿದ್ದನ್ನು ಮರೆಯುವುದು ಹೇಗೆ? ಕ್ರಿಕೆಟಿನ ಮೂರೂ ವಿಭಾಗಗಳಿಗೆ ಹೊಂದಿಕೊಳ್ಳುವ ಒಬ್ಬ ಚಾಂಪಿಯನ್ ಆಟಗಾರ ಇಂದು ಭಾರತದಲ್ಲಿ ಇದ್ದರೆ ಅದು ಧೋನಿ ಮಾತ್ರ. ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ!

ಧೋನಿ ಕ್ರೀಸಿಗೆ ಬರುವಾಗ ‘ಧೋನಿ… ಧೋನಿ… ಧೋನಿ… ‘ ಎಂದು ಪ್ರೇಕ್ಷಕರು  ಸಂಭ್ರಮಿಸುವುದು, ಆತ ಮ್ಯಾಚ್ ಗೆಲ್ಲಿಸಿದಾಗ ಕುಣಿದು ಕುಪ್ಪಳಿಸಿ ಸೆಲೆಬ್ರೇಟ್  ಮಾಡುವುದು, ಧೋನಿ ಕಡಿಮೆ ರನ್ನಿಗೆ ಔಟ್ ಆದಾಗ ಛೇ! ಎಂದು ದುಃಖ ಪಡುವುದು… ಇವೆಲ್ಲವೂ ಭಾರತೀಯರು ಅವರನ್ನು ಪ್ರೀತಿಸಿದ  ಗುರುತುಗಳು. ಇತ್ತೀಚಿನ ವರ್ಷಗಳಲ್ಲಿ ಬೇರೆ ಯಾವ ಕ್ರಿಕೆಟರ್ ಕೂಡ ಅಂತಹ ಪ್ರೀತಿಯನ್ನು ಪಡೆದ  ಉದಾಹರಣೆ ಇಲ್ಲ. ಅಷ್ಟರ ಮಟ್ಟಿಗೆ ಧೋನಿ ಭಾರತೀಯರ ಹೃದಯ ಸಾಮ್ರಾಟ. ಕೊನೆಯ ಒಂದೆರಡು ವರ್ಷ ಒತ್ತಡದ ಕಾರಣ ಅವರ ಇನ್ನಿಂಗ್ಸ್ ಹರಿತ ಕಳೆದುಕೊಂಡಾಗ ಜನ ಬೈದದ್ದು ಕೂಡ ಅದೇ ಪ್ರೀತಿ ಮತ್ತು ನಿರೀಕ್ಷೆಯಿಂದ!

ಐಪಿಲ್ ಟೂರ್ನಿಯ ಆರಂಭದಿಂದ ಇಂದಿನವರೆಗೂ  ಧೋನಿ ಅಭಿಮಾನಿಗಳ ನಿರೀಕ್ಷೆಯ ಧ್ರುವತಾರೆ. ಎಲ್ಲ 11 ಐಪಿಲ್ ಟೂರ್ನಿ ಆಡಿರುವ,  CSK ತಂಡಕ್ಕೆ ಮೂರು ಬಾರಿ ವಿನ್ನರ್ ಟ್ರೋಫಿ, ಐದು ಬಾರಿ ರನ್ನರ್  ಟ್ರೋಫಿ ಗೆಲುವನ್ನು ತಂದು ಕೊಟ್ಟಿರುವ ಧೋನಿ ಐಪಿಲ್ ಕ್ರಿಕೆಟಿನ ನಿಜವಾದ ಬ್ರಾಂಡ್ ಅಂಬಾಸಿಡರ್! ರೈನಾ, ಜಡ್ಡು, ಬ್ರಾವೋ, ವಾಟ್ಸನ್, ಚಹರ್, ಇಮ್ರಾನ್ ತಾಹೀರ್ ಮೊದಲಾದ ಉತ್ಸಾಹಿ ಯುವಕರ ತಂಡವನ್ನು ಗೆಲ್ಲಿಸುತ್ತಾ, ಎಷ್ಟೋ ಬಾರಿ ತಾನು ಹಿಂದೆ ನಿಂತು ಉಳಿದವರನ್ನು ಮುಂದೆ ದೂಡಿದ  ಧೋನಿ ಸ್ಥಾಪಿಸಿದ ಮೈಲಿಗಲ್ಲುಗಳು ನೂರಾರು. ಇನ್ನೂ ಕೆಲವು ವರ್ಷ ಐಪಿಲ್ ಅವರು ಆಡುತ್ತಾರೆ ಅನ್ನುವುದು ನಮಗೆ ಸಮಾಧಾನದ ಸಂಗತಿ.

ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಹುದ್ದೆಗೆ ಏರಿದ ಕೇವಲ ಎರಡನೇ ಕ್ರಿಕೆಟರ್ ಧೋನಿ. ಅವರು ಸೇನೆಯ ಗರಿ ಗರಿಯಾದ  ಸಮವಸ್ತ್ರವನ್ನು ಧರಿಸಿ, ಶಿಸ್ತಲ್ಲಿ ಹೆಜ್ಜೆ ಹಾಕಿ ಪದ್ಮಶ್ರೀ ಪ್ರಶಸ್ತಿ ಪಡೆದ ಕ್ಷಣ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿ  ಓವೇಶನ್ ಪಡೆದದ್ದು…ಇಂತಹ ಕ್ಷಣಗಳು ಭಾರತೀಯರಿಗೆ ಮರೆತು ಹೋಗುವುದಿಲ್ಲ! ಆದರೂ ಸಚಿನ್, ದ್ರಾವಿಡ್ ಮೊದಲಾದವರಿಗೆ ನೀಡಿದಂತೆ ಒಂದು ಗೌರವದ ವಿದಾಯವನ್ನು ಧೋನಿಗೆ ಬಿಸಿಸಿಐ ಕೊಡಬೇಕಾಗಿತ್ತು ಎಂಬ ನೋವು ಅವರ ಅಭಿಮಾನಿಗಳಿಗೆ ಬಹು ವರ್ಷ ಕಾಡದೇ ಇರುವುದಿಲ್ಲ.

ಭಾರತವನ್ನು ಉತ್ಕಟವಾಗಿ ಪ್ರೀತಿಸಿದ, ಯುವ ಕ್ರಿಕೆಟ್ ಅಭಿಮಾನಿಗಳಿಗೆ ನಿರಂತರ ಸ್ಫೂರ್ತಿ ದೇವತೆಯಾಗಿ ನಿಂತ ಧೋನಿ ನಮ್ಮ ಇಂದಿನ ಐಕಾನ್!  MSD, we miss you in world cricket!

                                                                ರಾಜೇಂದ್ರ ಭಟ್ ಕೆ.

Previous articleಸಾರ್ಥಕ ಜೀವನಕೆ ಕಗ್ಗದ ಸಂದೇಶ ಪ್ರತಿ ಸೋಮವಾರ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರಿಂದ
Next articleಕಲಂಬಾಡಿಪದವು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

LEAVE A REPLY

Please enter your comment!
Please enter your name here