ಬೆಂಗಳೂರು : ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಮತ್ತು ರೈತರ ಅನುಕೂಲಕ್ಕಾಗಿ ರಾಜ್ಯ ಇ-ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ರೈತ ಬೆಳೆ ಸಮೀಕ್ಷೆ ಆಪ್ ಅನ್ನು ಲೋಕಾರ್ಪಣೆಗೊಳಿಸಲಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ನೂತನ ಆಪ್ ಅನ್ನು ಲೋಕಾರ್ಪಣೆಗೊಳಿಸಿ, ಕೃಷಿಕರು ಅಂತರ್ಜಾಲದ ಸಹಾಯದಿಂದ ಇನ್ನು ಮುಂದೆ ತಮ್ಮ ಅಂಗೈನಲ್ಲಿಯೇ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಪಡೆಯಬಹುದಾಗಿದೆ ಎಂದರು.
ಕಾರ್ಯನಿರ್ವಹಣೆ ಹೇಗೆ ?
ಈ ಮೊಬೈಲ್ ಅಪ್ಲೀಕೇಷನ್ ಅನ್ನು ರೈತರು ಆಂಡ್ರೈಡ್ ಮೊಬೈಲ್ ಸಹಾಯದಿಂದ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ರೈತರು ತಮ್ಮ ಅಂಡ್ರೈಡ್ ಮೊಬೈಲ್ನಲ್ಲಿ ಪ್ಲೇಸ್ಟೋರ್ ಮೂಲಕ ಬೆಳೆ ಸಮೀಕ್ಷೆ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್ ಓಟಿಪಿ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ನೋಂದಣಿಯಾದ ನಂತರ ತಮ್ಮ ಜಮೀನಿರುವ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್ ಸೇರಿದಂತೆ ಜಮೀನಿನ ವಿವರಗಳನ್ನು ಪಡೆದು ತಮ್ಮ ಗ್ರಾಮದ GIS ನಕ್ಷೆಯನ್ನು ಡೌನ್ಲೋಡ್ ಮಾಡಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರೆ ವಿವರಗಳನ್ನು ಮತ್ತು ಛಾಯಾಚಿತ್ರಗಳನ್ನು ಮೊಬೈಲ್ ಆಪ್ ನಲ್ಲಿ ಸಂಗ್ರಹಿಸಿ ಅಪ್ಲೋಡ್ ಮಾಡಬೇಕು. ಆಗ ರೈತರ ಸರ್ವೆ ನಂಬರ್ ವಾರು ಜಮೀನಿನ ಬೆಳೆಯ ವಿವರಗಳನ್ನು ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್ ನಲ್ಲಿ ಸಂಗ್ರಹಣೆ ಮಾಡಿ ವಿವಿಧ ಯೋಜನೆಗಳಿಗೆ ಬಳಸಲಾಗುತ್ತದೆ.
ಏನು ಅನುಕೂಲ ?
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ, ಕ್ಷೇತ್ರ, ಖುಷ್ಕಿ ನೀರಾವರಿ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಸ್ವತಃ ದಾಖಲಿಸಬಹುದು. ಈ ಬೆಳೆ ಸಮೀಕ್ಷೆಯ ಮಾಹಿತಿಯಿಂದ ಕನಿಷ್ಟ ಬೆಂಬಲ ಬೆಲೆ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರಿಗೆ ಬೆಳೆ ಪರಿಹಾರ, ಸಬ್ಸಿಡಿ, ಬೆಳೆವಿಮೆ, ಬೆಳೆ ಸಾಲ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುಕೂಲವಾಗಲಿದೆ.
ರೈತರ ಪಹಣಿಗಳಲ್ಲಿ ನಮೂದಾಗಿರುವ ಬೆಳೆ ಮಾಹಿತಿ ಪರಿಷ್ಕರಿಸಿ, ಸ್ಪಷ್ಟತೆ ಸಲುವಾಗಿ ಎನ್.ಐ.ಸಿ.ಯಿಂದ (ರಾಷ್ಟ್ರೀಯ ಮಾಹಿತಿ ಕೇಂದ್ರ) ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಹಿಂದೆ ನಡೆಯುತ್ತಿದ್ದ ಸಮೀಕ್ಷೆಗಳಲ್ಲಿ ಕೆಲವು ವ್ಯತ್ಯಾಸಗಳು ಕಾಣಿಸುತ್ತಿದ್ದವು. ಈಗ ರೈತರು ತಾವೇ ಸ್ವತಃ ಖುದ್ದಾಗಿ ತಮ್ಮ ತಮ್ಮ ಹೊಲಗಳಲ್ಲಿ ಬೆಳೆಯೊಂದಿಗೆ ಸರ್ವೇ ನಂಬರ್, ಹಿಸ್ಸಾ ನಂಬರ್‌ವಾರು ಬೆಳೆ ಮಾಹಿತಿಯನ್ನು ಜಮೀನಿನಲ್ಲಿ ನಿಂತು ಫೋಟೋ ತೆಗೆದು ಅಪ್ಲೋಡ್ ಮಾಡಬಹುದಾಗಿದೆ.
ಸಮೀಕ್ಷೆ ಅವಧಿ: ಆಗಸ್ಟ್ 10ರಿಂದ 24 ರವರೆಗೆ 14 ದಿನಗಳ ಕಾಲ ಮೊಬೈಲ್ ಆಪ್ ನಲ್ಲಿ ರೈತರು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡಬಹುದು. ರೈತರು ಆಪ್‌ನಲ್ಲಿ ಮಾಡಿದ ಬೆಳೆ ಸಮೀಕ್ಷೆಯನ್ನು ಸರಕಾರಿ ಅಧಿಕಾರಿಗಳು ಪರಿಶೀಲಿಸಿ ಪ್ರಮಾಣೀಕರಿಸಲಿದ್ದಾರೆ ಮತ್ತು ಇದೇ ದತ್ತಾಂಶವು ಮುಂಬರುವ ದಿನಗಳಲ್ಲಿ ರೈತರಿಗೆ ಹಾಗೂ ಇಲಾಖೆಗಳಿಗೆ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಪ್ ಡೌನ್ ಲೋಡ್ ಮಾಡಲು ಲಿಂಕ್ ಕ್ಲಿಕ್ ಮಾಡಿ