ರಾಂಚಿ, ಆ .12: ಕಲಿಯಲು ವಯಸ್ಸು ಅಡ್ಡಿಯಲ್ಲ ಎನ್ನುವುದೇನೂ ನಿಜ. ಆದರೆ 54 ವರ್ಷದ ವ್ಯಕ್ತಿ ಪಿಯುಸಿಗೆ ಸೇರಿದರೆ ಹೇಗಾಗಬಹುದು? ಅದೂ ರಾಜ್ಯದ ಸಚಿವರೇ ಈ ವಯಸ್ಸಿನಲ್ಲಿ ಕಾಲೇಜಿಗೆ ಸೇರಿ ಕಲಿಯಲು ಮುಂದಾದರೆ ಅಲ್ಲಿರುವ ವಿದ್ಯಾರ್ಥಿಗಳಿಗೆ ಹೇಗೆನಿಸಬಹುದು? ಇಂಥ ಒಂದು ಅನುಭವ ಸದ್ಯದಲ್ಲೇ ಜಾರ್ಖಂಡ್‌ನ ವಿದ್ಯಾರ್ಥಿಗಳಿಗೆ ಆಗಲಿದೆ.ಇಲ್ಲಿನ ಶಿಕ್ಷಣ ಸಚಿವರೇ ಈಗ ವಿದ್ಯಾರ್ಥಿಯಾಗಲು ಹೊರಟಿದ್ದಾರೆ.
ಜಾರ್ಖಂಡ್‌ನ ಶಿಕ್ಷಣ ಸಚಿವ ಜಗನ್ನಾಥ್ ಮಹತೋ. ಎಸ್ಎಸ್ಎಲ್‌ಸಿ ಮುಗಿಸಿ ಇದೀಗ 25 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ಟೀಕೆ ಮಾಡುತ್ತಿರುವ ಟೀಕಾಕಾರರಿಗೆ ಉತ್ತರ ನೀಡಲು ತಯಾರಾಗಿದ್ದಾರೆ.
ಸಚಿವರು ಹತ್ತನೇ ತರಗತಿ ಪೂರ್ಣಗೊಳಿಸಿದ್ದು ತಮ್ಮ 29 ನೇ ವಯಸ್ಸಿನಲ್ಲಿ. ಇದಾಗಿ 25 ವರ್ಷಗಳೇ ಕಳೆದಿದ್ದು, ಸದ್ಯ ಇದೀಗ ಮತ್ತೆ ಅಧ್ಯಯನ ನಡೆಸಲು ಕಾಲೇಜಿಗೆ ಸೇರಿಕೊಂಡಿದ್ದಾರೆ. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಸಚಿವರು ರಾಜ್ಯಶಾಸ್ತ್ರದಲ್ಲಿ ತಮಗೆ ಹೆಚ್ಚಿನ ಆಸಕ್ತಿ ಎಂಬುದಾಗಿಯೂ ತಿಳಿಸಿದ್ದಾರೆ. ಸದ್ಯ ಇವರಿಗೆ 54 ವರ್ಷ ವಯಸ್ಸಾಗಿದ್ದು ನವಯ ದೇವಿ ಮಹತೋ ಮೆಮೋರಿಯಲ್ ಇಂಟರ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಸೇರಿ ಒಂದು ವಿಶಿಷ್ಟ ದಾಖಲೆ ಬರೆದಿದ್ದಾರೆ.
ಶಿಕ್ಷಣ ಸಚಿವರಾಗಿರುವ ಇವರ ವಿದ್ಯಾಭ್ಯಾಸ, ಶೈಕ್ಷಣಿಕ ಅರ್ಹತೆಗಳ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡಿದ್ದ ಬೆನ್ನಲ್ಲೇ, ಸಚಿವರು ಕಾಲೇಜಿಗೆ ಸೇರಿದ್ದಾರೆ. ಆ ಮೂಲಕವೇ ವಿರೋಧಿಗಳ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಗಿರಿಧ್‌ನ ಧುಮ್ರಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿಗರುವ ಇವರು, ಹೇಮಂತ್ ಸೊರೇನ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಆ ಬಳಿಕ ಅವರನ್ನು ವಿಪಕ್ಷ ನಾಯಕರು ವಿದ್ಯಾಭ್ಯಾಸದ ಆಧಾರದಲ್ಲಿ ಟೀಕಿಸತೊಡಗಿದ್ದರು. ಸದ್ಯ ಈ ಟೀಕೆಗಳಿಗೆಲ್ಲ ಉತ್ತರ ನೀಡುವ ಸಲುವಾಗಿ ಸಚಿವರು ಮತ್ತೆ ಕಾಲೇಜಿನತ್ತ ಮುಖ ಮಾಡಿದ್ದು, ಇತರರಿಗೂ ಮಾದರಿಯಾಗಿದ್ದಾರೆ.