ಮಂಗಳೂರು, ಆ. 7 : ಮಲೆನಾಡಿನಲ್ಲಿ ಕೆಲ ದಿನಗಳಂದೀಚೆಗೆ ಎಡೆಬಿಡದೆ ಸುರಿಯುತ್ತಿರುವ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಆಗಿದೆ.
ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಚಾರ್ಮಾಡಿ ಘಾಟ್ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಇದರಿಂದ ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ರಸ್ತೆ ಬಂದ್ ಆಗಿದೆ. ರಸ್ತೆಗೆ ಬಿದ್ದಿರುವ ಭಾರೀ ಗಾತ್ರದ ಬಂಡೆ-ಮರ-ಮಣ್ಣಿನಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಚಾರ್ಮಾಡಿ ಘಾಟ್ ಅಲೇಕಾನ್ ಬಳಿ ಘಟನೆ ನಡೆದಿದೆ. ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯ ನಡೆಸಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಂಗಳೂರು ರಸ್ತೆ ಸಂಪರ್ಕ ಬಂದ್ ಆಗಿದ್ದು, ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಿದೆ. ಕಪ್ಪೆ ಶಂಕರ ದೇವಾಲಯ ಕೂಡ ಮುಳುಗಡೆಯಾಗಿದೆ. ಹಾಗೇ, ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಿಂದ ಬಾಳೆಹೊನ್ನೂರಿನ ಸಂತೆ ಮೈದಾನದ ಕಟ್ಟಡಗಳು, ಮಳಿಗೆಗಳು ಜಲಾವೃತವಾಗಿವೆ. ಇದರಿಂದ ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಭಾಗದಲ್ಲೂ ಮಳೆ ಮುಂದುವರೆದಿದೆ. ಮಲೆನಾಡಿನ ಜನಜೀವನದ ಸಂಪೂರ್ಣ ಅಸ್ತವ್ಯಸ್ತವಾಗಿದೆ.ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಎರಡೇ ದಿನದಲ್ಲಿ ಇಬ್ಬರು ಬಲಿಯಾಗಿದ್ದಾರೆ.