ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯ

ಬೆಂಗಳೂರು, ಆ. 7 : ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ರಾಮ ಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ಕಾಶಿ ಹಾಗೂ ಮಥುರಾಗಳಲ್ಲಿಯೂ ಅಯೋಧ್ಯಾಯಂತೆಯೇ ಮಂದಿರ ನಿರ್ಮಾಣವಾಗಬೇಕು ಎಂದಿರುವ ಹೇಳಿಕೆ ವಿವಾದಕ್ಕೊಳಗಾಗಿದೆ.

ಸಮಾಜದಲ್ಲಿ ಶಾಂತಿ ಭಂಗವುಂಟಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪನವರನ್ನು ಸಿಎಂ ಯಡಿಯೂರಪ್ಪನವರು ಕೂಡಲೇ ಸಚಿವ ಸ್ಥಾನದಿಂದ ತೆಗೆಯಬೇಕು. ಪೊಲೀಸ್ ಇಲಾಖೆ ಸುಮೊಟೊ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ  ಅಧ್ಯಕ್ಷ ಡಿ.ಕೆ. ಶಿವಕುಮಾರ್   ಆಗ್ರಹಿಸಿದ್ದಾರೆ.

ಈಶ್ವರಪ್ಪನವರು ಬುಧವಾರ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಸಮಾಜದಲ್ಲಿ ಶಾಂತಿ ಭಂಗವುಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಅಯೋಧ್ಯೆ ಮತ್ತು ಮಥುರಾದಲ್ಲಿ ಮಸೀದಿ, ಮಂದಿರಗಳನ್ನು ತೆರವುಗೊಳಿಸಿದಂತೆ ರಾಜ್ಯದಲ್ಲೂ ಎಲ್ಲಾ ಮಸೀದಿ, ಮಂದಿರಗಳನ್ನು ತೆರವುಗೊಳಿಸಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸಚಿವರಾಗಿ ಈಶ್ವರಪ್ಪನವರು ಇಂಥಹ ಹೇಳಿಕೆ ನೀಡಬಾರದು. ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದರೆ, ಟ್ವೀಟ್ ಮಾಡಿದರೆ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತದೆ. ಸಚಿವ ಈಶ್ವರಪ್ಪನವರು ಪ್ರಚೋದನಾಕಾರಿ ಹೇಳಿಕೆ ನೀಡಿ 24 ತಾಸು ಕಳೆದರೂ  ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಇದು ಸರಿಯಲ್ಲ ಎಂದರು.

ಬಾಬರಿ ಮಸೀದಿಯನ್ನು ಹೊರತುಪಡಿಸಿ, ದೇಶದ ಯಾವುದೇ ಮಸೀದಿ, ಮಂದಿರಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅಂತಹದ್ದರಲ್ಲಿ ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಈಶ್ವರಪ್ಪನವರು ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಬಾರದು. ಸಿಎಂ ಯಡಿಯೂರಪ್ಪನವರು ಕೂಡಲೇ ಈಶ್ವರಪ್ಪನವರ ವಿರುದ್ಧ ಕ್ರಮಕೈಗೊಳ್ಳಬೇಕು. ಸಚಿವ ಸ್ಥಾನದಿಂದ ಕೈ ಬಿಡಬೇಕು. ಪೊಲೀಸ್ ಇಲಾಖೆಯ ಡಿಜಿಪಿಯವರೇ ಸುಮೊಟೊ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!
Scroll to Top