
ಉಡುಪಿ, : ಕಾರ್ಕಳದಲ್ಲಿ ಹೊಸದಾಗಿ ವಿವಿಧೋದ್ದೇಶ ಆಶ್ರಯ ತಾಣ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಕಳೆದ ಬಾರಿಯಂತೆ ಈ ಬಾರಿ ನೆರೆ ಅವಘಡಗಳು ಆಗದಂತೆ ಸರಕಾರ ಎಚ್ಚರಿಕೆ ವಹಿಸಿದೆ. ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಕಡಲಿಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸುವ ಕಾರ್ಯದ ಬಗ್ಗೆ ಚಿಂತನೆಯನ್ನು ನಡೆಸಲಾಗಿದೆ ಎಂದು ಪಡುಬಿದ್ರೆ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕಂದಾಯ ಸಚಿವ ಅಶೋಕ್ ಸುದ್ದಿಗಾರರಿಗೆ ತಿಳಿಸಿದರು.
ಸುನಾಮಿ ಸೆಂಟರ್
ಪ್ರಾಕೃತಿಕ ವಿಕೋಪದಂತಹ ಸಮಸ್ಯೆಗಳನ್ನು ಎದುರಿಸಲು ರಾಜ್ಯ ಸರಕಾರ ಸನ್ನದ್ಧವಾಗಿದೆ. ಉಡುಪಿ ಜಿಲ್ಲೆಯ ಕಾಪು ಮತ್ತು ತೆಕ್ಕಟ್ಟೆಯಲ್ಲಿ ಸುನಾಮಿ ಸೆಂಟರ್ ಗಳು ಪ್ರವಾಹ ಸಂತ್ರಸ್ತರಿಗಾಗಿ ಸಿದ್ಧವಾಗಿದೆ ಎಂದು ಅಶೋಕ್ ಹೇಳಿದರು. ದ.ಕ. ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಮತ್ತಿತರರು ಜೊತೆಗಿದ್ದರು.
ಶಾಸಕ ವಿ. ಸುನಿಲ್ ಕುಮಾರ್ ಅವರ ಮನವಿ ಮೇರೆಗೆ 10 ಕೋಟಿ ರೂ. ವೆಚ್ಚದಲ್ಲಿ ಕಾರ್ಕಳದಲ್ಲಿ ನಿರ್ಮಾಣವಾಗಲಿರುವ ವಿವಿದ್ಧೋದ್ದೇಶ ತಾಣವು ಬಹು ಉಪಯೋಗಿಯಾಗಲಿದೆ. ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ನಂತಹ ಸಮಸ್ಯೆ ಬಂದೊದಗಿದಾಗ ಆಶ್ರಯ ಕಲ್ಪಿಸಲು, ಸರಕಾರದ ಮಟ್ಟದ ಸಭೆ, ಇನ್ನಿತರ ತರಬೇತಿ ಕಾರ್ಯಕ್ರಮವನ್ನು ಈ ಕೇಂದ್ರದಲ್ಲಿ ಆಯೋಜಿಸಬಹುದಾಗಿದೆ. ವ್ಯವಸ್ಥಿತವಾದ ವಸತಿ ಕೇಂದ್ರ, ಅಡುಗೆ ಕೋಣೆ, ಮೀಟಿಂಗ್ ಹಾಲ್ ಕೂಡ ಈ ತಾಣ ಒಳಗೊಂಡಿದೆ.