ಬೆಂಗಳೂರು, ಜುಲೈ 30:ಮನೆ ಬಾಗಿಲಿಗೆ ಮದ್ಯ ಪೂರೈಸುವ ವಿವಾದಗ್ರಸ್ತ ಪ್ರಸ್ತಾವದ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ರಾಜ್ಯಗಳು ಮನೆ ಬಾಗಿಲಿಗೆ ಮದ್ಯ ಪೂರೈಸಿ ಯಶಸ್ಸು ಕಂಡಿವೆ.ಇದರಿಂದ ಪ್ರೇರಿತವಾಗಿ ಅಬಕಾರಿ ಇಲಾಖೆ ಕರ್ನಾಟಕದಲ್ಲೂ ಇದನ್ನು ಜಾರಿಗೆ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಹೋಮ್ ಡೆಲಿವರಿ ಮೂಲಕ ಮದ್ಯ ಪೂರೈಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.ಕೇರಳ ಮಾದರಿಯಲ್ಲಿ ಆಪ್ ಅಧಾರಿತ ಆನ್ ಲೈನ್ ಮದ್ಯ ಪೂರೈಕೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಅಬಕಾರಿ ಇಲಾಖೆ ಮುಂದಾಗಿದೆ. ನಂತರ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಕುರಿತಂತೆ ಮದ್ಯ ದಾಸ್ತಾನುದಾರರ ಜೊತೆ ಅಬಕಾರಿ ಇಲಾಖೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಎಲ್ಲವೂ ಸರಿಯಾದರೆ ಆಗಸ್ಟ್ ತಿಂಗಳಿನಿಂದ ಆನ್ ಲೈನ್ ಮದ್ಯ ಪೂರೈಕೆ ಆರಂಭವಾಗುವ ಸಾಧ್ಯತೆಯಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ 6 ರಾಜ್ಯಗಳಲ್ಲಿ ಆನ್ ಲೈನ್ ಡೆಲಿವರಿ ವ್ಯವಸ್ಥೆ ಜಾರಿಗೆ ಬಂದಿದೆ.
ಪಂಜಾಬ್ ಸರ್ಕಾರ ಈಗಾಗಲೇ ಆನ್ ಲೈನ್ ಮೂಲಕ ಬುಕ್ ಮಾಡಿದ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶುರು ಮಾಡಿದೆ. ಇನ್ನು, ಕೆಲವು ರಾಜ್ಯಗಳಲ್ಲಿ ಇಷ್ಟರಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿವೆ. ಮನೆ ಬಾಗಿಲಿಗೆ ನದ್ಯ ಪೂರೈಸಿದರೆ ಕುಡಿದು ವಾಹನ ಚಲಾಯಿಸಿ ಅಪಘಾತವಾಗುವುದನ್ನು ತಡೆಗಟ್ಟಬಹುದುಎಂಬ ಕಾರಣವನ್ನು ಸರಕಾರ ಇದಕ್ಕೆ ಕೊಟ್ಟಿದೆ. ಜೊಮಾಟೊ, ಸ್ವಿಗ್ಗಿಯಂಥ ಆನ್ ಲೈನ್ ಡೆಲಿವರಿ ಅಪ್ ಗಳ ನೆರವಿನಿಂದ ಮದ್ಯ ಪೂರೈಸುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ.