ಬೆಂಗಳೂರು,ಜು.29- ಹಲವು ಆಕಾಂಕ್ಷಿಗಳು ಕಾತರದಿಂದ ಕಾಯುತ್ತಿರುವ ಸಂಪುಟ ವಿಸ್ತರಣೆ ಆಗಸ್ಟ್ 2ನೇ ವಾರದಲ್ಲಿ ಆಗುವ ಸಂಭವವಿದೆ. ಸಂಪು ವಿಸ್ತರಣೆಯೇ ಅಥವಾ ಪೋರ್ಣ ಪ್ರಮಾಣದ ಪುನಾರಚನೆಯೇ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಈಗಾಗಲೇ ಲಾಬಿ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಅನುಮತಿ ಪಡೆಯುವರು. ಒಂದು ವೇಳೆ ವರಿಷ್ಠರು ಅನುಮತಿ ಕೊಟ್ಟರೆ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಸಂಪುಟ ವಿಸ್ತರಣೆಯಾಗುವುದು ಖಚಿತ ಎನ್ನಲಾಗುತ್ತಿದೆ.
ಆರು ಸಚಿವರಿಗೆ ಕೊಕ್?
ಒಬ್ಬ ಉಪಮುಖ್ಯಮಂತ್ರಿ ಸೇರಿ ಆರು ಸಚಿವರಿಗೆ ಕೊಕ್ ಕೊಟ್ಟು 10 ಮಂದಿ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.ಡಿಸಿಎಂ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಹಾಗೂ ಪ್ರಭು ಚವ್ಹಾಣ್, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಂಪುಟದಿಂದ ಕೊಕ್ ನೀಡಲಾಗುತ್ತದೆ ಎನ್ನಲಾಗಿದೆ.
ಸದ್ಯ ಖಾಲಿ ಉಳಿದಿರುವ ಸಚಿವ ಸ್ಥಾನಗಳನ್ನು ಸೇರಿಸಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಮೇಲ್ಮನೆ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ಹೆಚ್.ವಿಶ್ವನಾಥ್, ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಸುಳ್ಯ ಶಾಸಕ ಅಂಗಾರ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಡಿಸಿಎಂ ಲಕ್ಷ್ಮಣ್ ಸವದಿ, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಸಿ.ಸಿ. ಪಾಟೀಲ್ ಸೇರಿ ಆರು ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಖಾಲಿ ಇರುವ ಆರು ಸ್ಥಾನ ಸೇರಿ 10 ಜನ ಹೊಸಬರಿಗೆ ಅವಕಾಶ ಕೊಡಲಾಗುತ್ತಿದೆ. ಅಲ್ಲದೆ, ಎರಡು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರ ಖಾತೆಗಳನ್ನು ಬದಲಿಸಲಾಗುತ್ತಿದೆ. ಎಂಟಿಬಿ, ಆರ್. ಶಂಕರ್, ತಿಪ್ಪಾರೆಡ್ಡಿ, ರಾಮದಾಸ್, ರಾಜೀವ್ ಕುಡಚಿ, ಅಂಗಾರ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಚ್. ವಿಶ್ವನಾಥ್ ಮತ್ತು ಮುರಗೇಶ್ ನಿರಾಣಿ ಅವರು ಮತ್ತೊಮ್ಮೆ ಸಚಿವರಾಗುವ ಭಾಗ್ಯ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಶ್ರೀನಿವಾಸ v/s ಶ್ರೀನಿವಾಸ

ಮುಜರಾಯಿ ಖಾತೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೈ ಬಿಟ್ಟು ಅವರ ಬದಲಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಮಂತ್ರಿ ಮಾಡಲಾಗುವುದು ಎಂಬ ವದಂತಿ ಜೋರಾಗಿ ಕೇಳಿ ಬರುತ್ತಿದೆ.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಲೂ ಹಾಲಾಡಿಯವರಿಗೆ ಮಂತ್ರಿ ಪದವಿ ನೀಡಬೇಕೆಂಬ ಬಲವಾದ ಒತ್ತಾಯವಿತ್ತು. ಆದರೆ ಏನೇನೊ ರಾಜಕೀಯ ಲೆಕ್ಕಾಚಾರದಿಂದಾಗಿ ಮೇಲ್ಮನೆ ಸದಸ್ಯರಾಗಿರುವ ಶ್ರೀನಿವಾಸ ಪೂಜಾರಿಯವರಿಗೆ ಮಂತ್ರಿ ಸ್ಥಾನ ಒಲಿದು ಬಂದಿತ್ತು.
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಒಂದು ಸ್ಥಾನ ಬಿಟ್ಟು ಉಳಿದ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ಕರಾವಳಿಗೆ ಹೆಚ್ಚಿನ ಅವಕಾಶ ಕೊಡಬೇಕೆಂಬ ಆಭಿಪ್ರಾಯ ಇದೆ. ಶ್ರೀನಿವಾಸ ಪೂಜಾರಿಯವರನ್ನು ಉಳಿಸಿಕೊಂಡು ಹಾಲಾಡಿಯವರಿಗೆ ಅವಕಾಶ ಕೊಡಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಬಿಜೆಪಿ ಸರಕಾರ ಬಂದಾಗಲೆಲ್ಲ ಸಂಪುಟದಲ್ಲಿ ಕರಾವಳಿಗೆ ಅನ್ಯಾವಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಇದೆ. ಈ ಸಲವಾದರೂ ಈ ಆರೋಪ ಕೇಳಿ ಬರದಿರಲಿ ಎನ್ನುವುದು ಇಲ್ಲಿನ ಬಿಜೆಪಿಯವರ ಕೋರಿಕೆ. ಅಲ್ಲದೆ ಶ್ರೀನಿವಾಸ ಪೂಜಾರಿಯವರನ್ನು ಕೈಬಿಟ್ಟರೆ ಅವರ ಸಮುದಾಯದವರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯವಿದೆ.