ಬೆಂಗಳೂರು, ಜು. 29: ಪಠ್ಯ ಪುಸ್ತಕಗಳಿದ ಕೆಲವು ಮಹಾತ್ಮರ ಮತ್ತು ಮಹಾಪುರುಷರ ಪಾಠಗಳನ್ನು ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ಎತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ , ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಾಠಗಳನ್ನು ಹತ್ತನೇ ತರಗತಿಯ ಪಠ್ಯ ಪುಸತಕದಿಂದ ದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಅಧಿಕೃತ ಸರ್ಕಾರ ದುರ್ಬಲಗೊಳ್ಳುತ್ತಿದೆ, ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10ನೇ ತರಗತಿ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟು ರಾಜ್ಯ ಬಿಜೆಪಿ ಸರ್ಕಾರ ಶಾಲಾ ಪಠ್ಯವನ್ನೇ ಕೇಸರೀಕರಣಗೊಳಿಸುತ್ತಿದೆ. ಈ ಮೂಲಕ ತನ್ನ ಮೂಲ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದೆ, ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಸರಕಾರ ಕೊರೊನಾ ಕಾರಣದಿಂದಾಗಿ ಈಗಾಗಲೇ ಈ ವರ್ಷದ ಶೈಕ್ಷಣಿಕ ವರ್ಷದ ಎರಡು ತಿಂಗಳು ಮುಗಿದಿದೆ.ಎಲ್ಲ ರಾಜ್ಯಗಳಲ್ಲಿ ಪಾಠಗಳನ್ನು ಕಡಿತಗೊಳಿಸುವ ಕ್ರಮ ಅನುಸರಿಸಲಾಗಿದೆ. ರಾಜ್ಯ ಸರಕಾರವೂ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಪಾಠಗಳನ್ನು ಕೈಬಿಟ್ಟಿದೆ. ಇದರಲ್ಲಿ ಯಾವುದೇ ಅಜೆಂಡಾ ಇಲ್ಲ ಎಂದು ಹೇಳಿದೆ.