ಮುಂಬಯಿ: ರಾಜಸ್ಥಾನದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಸಚಿನ್ ಪೈಲಟ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ನಾಯಕನಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್ನ ವಕ್ತಾರರಾಗಿದ್ದ ಕೈ ಮುಖಂಡ ಸಂಜಯ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸಲಾದೆ.
ತಕ್ಷಣವೇ ಜಾರಿಗೆ ಬರುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಸಾಹೇಬ್ ಥೋರಟ್ ನಿನ್ನೆ ಈ ಆದೇಶ ಹೊರಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಿಸ್ತು ನಿಯಮ ಉಲ್ಲಂಘನೆ ಕಾರಣಕ್ಕೆ ಮಹಾರಾಷ್ಟ್ರದ ಸಂಜಯ್ ಝಾ ಅವರನ್ನು ಉಚ್ಛಾಟಿಸಲಾಗಿದೆ. ಮಹಾರಾಷ್ಟ್ರ ಘಟಕದ ಕಾಂಗ್ರೆಸ್ ಪಕ್ಷ ಮಂಗಳವಾರ ಈ ಶಿಸ್ತಿನ ಕ್ರಮ ಕೈಗೊಂಡಿರುವುದನ್ನು ಟ್ವೀಟ್ ಮೂಲಕ ತಿಳಿಸಿದೆ.
ಸಚಿನ್ ಪೈಲಟ್ ಅವರ ನಡೆಯನ್ನು ಝಾ ಸಮರ್ಥಿಸಿಕೊಂಡಿದ್ದರು, ಹಾಗೂ ಟಿವಿ ಚಾನಲ್ ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾರ್ಚ್ ತಿಂಗಳಲ್ಲಿ ಸಂಜಯ್ ಝಾ ಅವರು ಪಕ್ಷದ ಬಗ್ಗೆ ಕಟು ಟೀಕೆ ಮಾಡಿ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. ಹೀಗಾಗಿ ಅವರು ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.