ಜಿನೇವಾ:ಕೊರೊನಾ ನಮ್ಮ ಬದುಕನ್ನು ಪೂರ್ಣವಾಗಿ ಅಲ್ಲದಿದ್ದರೂ ಭಾಗಶ: ಬಾಧಿಸಲಿದೆ ಎಂದು ಅನೇಕರು ಹಲವು ಸಂದರ್ಭಗಳಲ್ಲಿ ಹೇಳಿದ್ದರು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯೂ ಇದೇ ಮಾತನ್ನು ಹೇಳಿದೆ.
ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಪರಿಸ್ಥಿತಿಗೆ ಮರಳುವುದು ನಿಕಟ ಭವಿಷ್ಯದಲ್ಲಿ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟಪಡಿಸಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಕೊರೊನಾಗೆ ಮುಂಚಿನ ಜೀವನಕ್ಕೆ ಮರಳುವುದು ನಿಕಟ ಭವಿಷ್ಯದಲ್ಲಿ ಸ್ವಲ್ಪ ಕಷ್ಟಕರವಾಗಲಿದೆ ಮತ್ತು ಹೊಸ ಪರಿಸ್ಥಿತಿಯಲ್ಲಿ ಬದುಕಬೇಕಾಗಲಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಕೊರೊನಾ ವೈರಸ್ ಸೋಂಕು ನಿರಂತರ ಏರಿಕೆಯಾಗುತ್ತಲೇ ಇದೆ ಎಂದು ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಎಡನೋಮ್ ಗೆಬ್ರಿಯಸ್. ನಿಕಟ ಭವಿಷ್ಯದಲ್ಲಿ ಕೊರೊನಾ ಮುಂಚಿನ ಕಾಲಕ್ಕೆ ಮರಳುವ ಸಂಭವನೀಯತೆಗಳು ಕಡಿಮೆಯಾಗಿವೆ. ಒಂದು ವೇಳೆ ಕೊರೊನಾ ತಡೆಗಟ್ಟಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಜಾರಲಿದೆ ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವರ್ಚುವಲ್ ಬ್ರೀಫಿಂಗ್ ವೇಳೆ ಮಾತನಾಡಿರುವ ಡಬ್ಲ್ಯುಎಚ್‌ಒ ಮಹಾನಿರ್ದೇಶಕರು, “ವಿಶ್ವದ ಅನೇಕ ದೇಶಗಳು ತಪ್ಪು ದಿಕ್ಕಿನಲ್ಲಿ ಸಾಗುತ್ತಿವೆ ಮತ್ತು ವೈರಸ್ ಜನರ ಅತಿ ದೊಡ್ಡ ಶತ್ರುವಾಗಿ ಮುಂದುವರೆದಿದೆ.” ಎಂದು ಹೇಳಿದ್ದಾರೆ. ಒಂದು ವೇಳೆ ಮೂಲಭೂತ ಅಂಶಗಳನ್ನು ಅನುಸರಿಸದೆ ಹೋದರೆ ಪರಿಸ್ಥಿತಿ ಕೆಟ್ಟ ಸ್ಥಿತಿಯಿಂದ ಅತಿ ಕೆಟ್ಟ ಸ್ಥಿತಿಗೆ ತಲುಪಲಿದೆ ಎಂದಿದ್ದಾರೆ.