ದಿಲ್ಲಿ :ಕೊರೊನಾ ವೈರಸ್ ಜಗತ್ತಿನ ಎದುರು ಹೊಸ ಸವಾಲನ್ನು ಇಟ್ಟಿದ್ದು, ಅದನ್ನು ಎದುರಿಸಲು ಎಲ್ಲರೂ ಸನ್ನದ್ಧರಾಗಿರಬೇಕೆಂದು ಪ್ರಧಾನಿ ನರೇಂದರ ಮೋದಿ ಹೇಳಿದ್ದಾರೆ. ಕೋವಿಡ್-19ನ ಈ ಸಂಕಷ್ಟದ ಈ ಸಮಯದಲ್ಲಿ ಸದಾ ನಾವು ಪ್ರಸ್ತುತವಾಗಿರಲು ನಮ್ಮಲ್ಲಿರುವ ಕೌಶಲಗಳನ್ನು ಹರಿತಗೊಳಿಸಬೇಕು ಎಂದು ಕರೆ ನೀಡಿದ್ದಾರೆ.
ವಿಶ್ವ ಯುವ ಕೌಶಲ ದಿನದ ಅಂಗವಾಗಿ ದಿಲ್ಲಿಯಲ್ಲಿ ಡಿಜಿಟಲ್ ಸಮ್ಮೇಳನದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ನಮ್ಮ ಕೆಲಸ, ಕಾರ್ಯಗಳು, ಉದ್ಯೋಗದ ಲಕ್ಷಣಗಳ ಜೊತೆಗೆ ಸಂಸ್ಕೃತಿಯನ್ನು ಕೂಡ ಬದಲಾಯಿಸಿದೆ. ವೇಗವಾಗಿ ತಂತ್ರಜ್ಞಾನ ಬದಲಾಗುತ್ತಿರುವ ಈ ಸಮಯಗಳಲ್ಲಿ ನಮ್ಮ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ, ಅದಕ್ಕೆ ತಕ್ಕಂತೆ ನಾವು ಆಧುನೀಕರಣವಾಗುತ್ತಿರಬೇಕು ಎಂದರು.
ನಾವು ಯಾವಾಗಲೂ, ಯಾವ ಪರಿಸ್ಥಿತಿಗೂ ಪ್ರಸ್ತುತವಾಗಿ ಉಳಿಯಲು ಕೌಶಲ, ಮರು ಕೌಶಲ, ಹೆಚ್ಚು ಕೌಶಲ ಹೊಂದಬೇಕಾಗಿರುವುದು ಯಶಸ್ಸಿನ ಮೂಲ ಮಂತ್ರವಾಗಿದೆ. ಹೊಸ ಕೌಶಲಗಳನ್ನು ಕಲಿಯುತ್ತಿರಬೇಕು, ಆ ಮೂಲಕ ನಮಗೆ ಅಗತ್ಯವಿರುವ ಮೌಲ್ಯಗಳನ್ನು ಬೆಳೆಸುತ್ತಾ ಹೋಗಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಕೆಲಸ, ಕೌಶಲಗಳ ಜೊತೆ ಹೊಸದನ್ನು ಕಲಿಯುತ್ತಾ ಹೋಗಿ, ಕೌಶಲದ ಮಟ್ಟವನ್ನು ಬೆಳೆಸಿಕೊಳ್ಳುತ್ತಾ ಹೋದರೆ ಆಗ ನಾವು ಯಾವ ಕಾಲಕ್ಕೂ ಸಲ್ಲುವವರಾಗಿ, ಯಾವತ್ತಿಗೂ ಪ್ರಸ್ತುತವಾಗುಳಿಯುತ್ತೇವೆ ಎಂದು ಯುವಜನತೆಗೆ ಕಿವಿಮಾತು ಹೇಳಿದರು.
ಒಬ್ಬ ವ್ಯಕ್ತಿ ಜೀವನದಲ್ಲಿ ಹೊಸ ವಿಷಯಗಳನ್ನು, ಹೊಸ ಕೌಶಲಗಳನ್ನು ಕಲಿಯದೆ ಇದ್ದರೆ ಕೆಲ ಸಮಯಗಳ ಬಳಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇಂತಹ ವಿಷಯಗಳನ್ನು ಇಷ್ಟೇ ವಯಸ್ಸಿನಲ್ಲಿ ಕಲಿಯಬೇಕು ಎಂಬ ನಿಯಮವೇನಿಲ್ಲ, ಹೊಸ ಕೌಶಲಗಳನ್ನು ಕಲಿತು ಮೈಗೂಡಿಸಿಕೊಳ್ಳಲು ನಿಮ್ಮಲ್ಲಿ ಆಸಕ್ತಿಯಿದ್ದರೆ ಸಾಕು, ಅದರಿಂದ ನಿಮಗೆ ಜೀವನದಲ್ಲಿ ಉತ್ಸಾಹ, ಶಕ್ತಿ ಹೆಚ್ಚುತ್ತದೆ ಎಂದರು.
ಈ ಸಮ್ಮೇಳನವನ್ನು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಆಯೋಜಿಸಿದ್ದು ಕೌಶಲ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವ ಕೂಡ ಇಂದು ಆಗಿದೆ.