ಇಂದೋರ್ : ಮಧ್ಯ ಪ್ರದೇಶದ ಇಂದೋರ್ ನಲ್ಲಿ 10 ವರ್ಷದ ಬಾಲಕನೊಬ್ಬ ಬರೀ 30 ಸೆಕೆಂಡಿನಲ್ಲಿ 10 ಲ. ರೂ. ಎಗರಿಸಿ ಇಡೀ ಭದ್ರತಾ ವ್ಯವಸ್ಥೆಯನ್ನೇ ಅಣಕಿಸಿದ್ದಾನೆ.
ನೀಮುಚ್ ಜಿಲ್ಲೆಯ ಜವಾಡ್ ನಲ್ಲಿರುವ ಸಹಕಾರಿ ಬ್ಯಾಂಕಿನ ಶಾಖೆಗೆ ಗ್ರಾಹಕರು ತುಂಬಿರುವ ಹೊತ್ತಿನಲ್ಲೇ ಬಂದ ಬಾಲಕ ಯಾರ ಅರಿವಿಗೂ ಬಾರದಂತೆ ಹಣ ಎಗರಿಸಿ ದಂಗು ಬಡಿಸಿದ್ದಾನೆ.ಕ್ಯಾಶಿಯರ್ ಯಾವುದೋ ಕೆಲಸಕ್ಕೆ ಕೌಂಟರ್ ನಿಂದ ಎದ್ದು ಹೋದ ಸಂದರ್ಭವನ್ನು ಬಳಸಿ ಈ ಕೃತ್ಯವನ್ನು ಎಸಗಿದ್ದಾನೆ.
ಹಳೆ ಚಿಂದಿ ಉಡುಪು ಧರಿಸಿದ್ದ ಬಾಲಕ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಬ್ಯಾಂಕಿಗೆ ಬಂದು ನೇರವಾಗಿ ಕ್ಯಾಶಿಯರ್ ಕೌಂಟರ್ ಒಳಗೆ ಹೋಗಿದ್ದಾನೆ. ವಿಚಿತ್ರವೆಂದರೆ ಕೌಂಟರ್ ಎದುರು ಗ್ರಾಹಕರು ಸಾಲಿನಲ್ಲಿ ನಿಂತಿದ್ದರೂ ಬಾಲಕ ಏನು ಮಾಡುತ್ತಿದ್ದಾನೆ ಎಂದು ಅವರ ಅರಿವಿಗೆ ಬಂದಿಲ್ಲ.ಕುಳ್ಳ ಬಾಲಕ ಮೇಜಿನ ಕೆಳಗಿನ ಟೊಳ್ಳು ಜಾಗದಲ್ಲಿ ನಿಂತುಕೊಂಡು 500 ರೂ. ಕಟ್ಟುಗಳನ್ನು ಚೀಲಕ್ಕೆ ತುಂಬಿಸಿಕೊಂಡು ಯಾರ ಅರಿವಿಗೂ ಬಾರದಂತೆ ಹೊರಗೆ ಹೋಗಿದ್ದಾನೆ. ಒಟ್ಟು 10 ಲ.ರೂ. ಅವನು ಎಗರಿಸಿದ್ದ. ಬ್ಯಾಂಕಿನ ಬಾಗಿಲಿನ ಬಳಿ ತಲುಪಿದ ಕೂಡಲೇ ಅವನು ಓಡಲು ತೊಡಗಿದಾಗ ಸೆಕ್ಯೂರಿಟಿ ಗಾರ್ಡ್ ಗೆ ಅನುಮಾನ ಬಂದು ಬೆನ್ನಟ್ಟಿದ. ಬರೀ ಅರ್ಧ ನಿಮಿಷದಲ್ಲಿ ಬಾಲಕ ಬ್ಯಾಂಕಿನೊಳಗೆ ತನ್ನ ಕೈಚಳಕ ತೋರಿಸಿದ್ದ.
ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿದಾಗ 20ರ ಹರೆಯದ ಯುವಕನೊಬ್ಬ ಅವನಿಗೆ ನಿರ್ದೇಶಗಳನ್ನು ನೀಡುತ್ತಿರುವುದು ಪತ್ತೆಯಾಗಿದೆ. ಬಾಲಕ ಮತ್ತು ಯುವಕ ಸುಮಾರು ಅರ್ಧ ತಾಸಿನಿಂದ ಬ್ಯಾಂಕಿನ ಎದುರು ಠಳಾಯಿಸುತ್ತಿದ್ದರು.ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅನುಮಾನದ ಮೇಲೆ ಕೆಲವರನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ.