ಮೆಹಂದಿ ಕಾರ್ಯಕ್ರಮದಲ್ಲಿ ಹರಡಿತು ಮಾರಕ ಕೊರೊನಾ-ನವವಧು ಸೇರಿ 8 ಮಂದಿಗೆ ಪಾಸಿಟಿವ್‌

ಉಡುಪಿ : ಸರಕಾರವೇನೂ ಸೀಮಿತ ಜನರು ಭಾಗವಹಿಸಬೇಕೆಂಬ  ಷರತ್ತು ವಿಧಿಸಿ ಮದುವೆ, ನಿಶ್ಚಿತಾರ್ಥ ಮತ್ತಿತರ ಶುಭ ಕಾರ್ಯಗಳಿಗೆ ಅನುಮತಿ ನೀಡುತ್ತದೆ. ಆದರೆ ಜನರು ಮಾತ್ರ ಸರಕಾರ ವಿಧಿಸಿದ ಷರತ್ತುಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ಕಾರ್ಯಕ್ರಮ ನಡೆಸುತ್ತಾರೆ. ಉಡುಪಿ ಜಿಲ್ಲೆಯಲ್ಲಿ ಹೀಗೆ ಒಂದು ಮದುವೆ ಕಾರ್ಯಕ್ರಮ ನಡೆಸಿ ಈಗ ಹಲವು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.  ನವವಧು ಸೇರಿದಂತೆ ಮೆಹಂದಿಗೆ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಮದುವೆಗೆ ಬಂದಿದ್ದ ಜನರೀಗ ಭೀತಿಯಿಂದ ನಡುಗುವಂತಾಗಿದೆ.

ಕೊಂಬಗುಡ್ಡೆಯ ಯುವತಿಯ ವಿವಾಹವು ಶಿವಮೊಗ್ಗ ಜಿಲ್ಲೆಯ ಹೊಸನಗರದ ಯುವಕನೊಂದಿಗೆ ಜೂ.25ರಂದು ನೆರವೇರಿತ್ತು. ವಧುವಿನ ಮನೆಯಲ್ಲಿ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ಅಲ್ಲದೇ ಹುಡುಗನ ಮನೆಯಲ್ಲಿ ನಡೆದ ಮದುವೆಯ ಸಮಾರಂಭದಲ್ಲಿಯೂ ನೂರಾರು ಮಂದಿ ಪಾಲ್ಗೊಂಡಿದ್ದರು. ಆದರೆ ಮದುವೆಯ ಸಂಭ್ರಮದಲ್ಲಿದ್ದ  ಕುಟುಂಬಕ್ಕೀಗ ಕೇವಲ 10 ದಿನಗಳಲ್ಲಿ ಕೊರೊನಾ ಶಾಕ್ ಕೊಟ್ಟಿದೆ. ನವ ವಧುವಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 7 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜುಲೈ 6ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ವಧುವನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೆಹಂದಿ ಶಾಸ್ತ್ರದಲ್ಲಿ ಪಾಲ್ಗೊಂಡ ಕೆಲವರನ್ನು ತಪಾಸಣೆಗೆ ಒಳಪಡಿಸಿದಾಗ 7 ಮಂದಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ಪೈಕಿ ಮೂವರು ಮಕ್ಕಳು, ಮೂವರು ಮಹಿಳೆಯರು, ಒಬ್ಬ ಪುರುಷನಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದೆ.ಆರೋಗ್ಯಾಧಿಕಾರಿಗಳು ವಧುವಿನ ಮನೆಯನ್ನು ಸೀಲ್ ಡೌನ್ ಮಾಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ.







































error: Content is protected !!
Scroll to Top