ಬೆಂಗಳೂರು: ಕೊರೊನಾಕ್ಕೆ ಇನ್ನೂ ಯಾವುದೇ ಔಷಧಿ ಅಥವಾ ಲಸಿಕೆ ಸಿಗದಿರುವುದರಿಂದ ಈಗ ಪ್ಲಾಸ್ಮಾ ಚಿಕಿತ್ಸೆಯನ್ನೇ ಅವಲಂಬಿಸಬೇಕಾಗಿದೆ. ದಿಲ್ಲಿ, ಕೇರಳ ಸೇರಿ ಕೆಲವು ರಾಜ್ಯಗಳು ಪ್ಲಾಸ್ಮಾ ಥರಪಿಯನ್ನು ಯಶಸ್ವಿಯಾಗಿ ಪ್ರಯೋಗಿಸುತ್ತಿವೆ. ಕರ್ನಾಟಕದಲ್ಲೂ ಈ ಪ್ರಯತ್ನ ಮುಂದುವರಿದಿದ್ದು ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಮೂಲಕ ರೋಗಿಗಳ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ರೋಗದಿಂದ ಗುಣಮುಖರಾಗಿರುವ ರೋಗಿಗಳನ್ನು ನಿರಂತರವಾಗಿ ಬ್ಲಡ್ ಪ್ಲಾಸ್ಮಾ ದಾನ ಮಾಡಲು ಕೇಳಿಕೊಳ್ಳಲಾಗುತ್ತಿದೆ. ಇತರ ಕೊರೊನಾ ರೋಗಿಗಳು ಚೇತರಿಸಿಕೊಳ್ಳಲು ಇದು ಸಹಾಯಕಾರಿಯಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದ ಈ ಮನವಿಗೆ ಸ್ಪಂದಿಸುತ್ತಿರುವ ಹಲವರು ಮುಂದೆ ಬಂದು ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಇದೀಗ ಇದೇ ಸರಣಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ಲಾಸ್ಮಾ ದಾನ ಮಾಡುವವರಿಗೆ ರೂ.5000 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ.
ಪ್ರತಿಯೊಬ್ಬ ಪ್ಲಾಸ್ಮಾ ದಾನಿಗೆ ಐದು ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.