ಬೆಂಗಳೂರು: ಸರಕಾರ ಹೊಸದಾಗಿ ಜಾರಿಗೆ ತರಲುದ್ದೇಶಿಲಿರುವ ಭೂ ಸುಧಾರಣಾ ಕಾಯಿದೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವಿರೋಧ ವ್ಯಕ್ತಪಡಿಸಿದ್ದಾರೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸರ್ಕಾರ ತೀರ್ಮಾನ ಮಾಡಿತ್ತು. ಈ ಬಗ್ಗೆ ನಾನು ತೀವ್ರ ವಿರೋಧ ವ್ಯಕ್ತಪಡಿಸಿದ್ದೆ. ಆದರೆ, ಕೋವಿಡ್ 19 ಸಂದರ್ಭ ಬಳಸಿಕೊಂಡು ಸರ್ಕಾರ ತಮ್ಮ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧ್ಯಾದೇಶ ಹೊರಡಿಸಿದ ದಿನ ಕರ್ನಾಟಕದ ಪಾಲಿಗೆ ಕರಾಳ ದಿನವಾಗಲಿದೆ. ಈ ತಿದ್ದುಪಡಿ ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ, ಸಾಮಾನ್ಯ ರೈತರ ವಿರೋಧಿಯಾದ ತಿದ್ದುಪಡಿ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂ ಸುಧಾರಣಾ ಕಾಯ್ದೆ 1961ಕ್ಕೆ 1974ರಲ್ಲಿ ದೇವರಾಜ ಅರಸು ಅವರು ಕ್ರಾಂತಿಕಾರಿ ನಿರ್ಣಯ ಮಾಡಿದರು. 1961ರ ಕಾಯ್ದೆಗೆ ಸೆಕ್ಷನ್ 63, 79A, 79B, 79C ಮತ್ತು ಸೆಕ್ಷನ್ 80 ಇವುಗಳನ್ನು ಸೇರ್ಪಡೆಗೊಳಿಸಿ, ಪ್ರಗತಿಪರವಾದ, ಸಾಮಾಜಿಕ ನ್ಯಾಯದಿಂದ ಕೂಡಿದ ನಿರ್ಣಯ ತಗೊಂಡ್ರು. ಗೇಣಿದಾರರಿಗೆ ನ್ಯಾಯ ಒದಗಿಸುವ ತಿದ್ದುಪಡಿ ಮಾಡಿದರು. 1/3/1974 ರಿಂದ ಈ ಕಾಯ್ದೆ ಜಾರಿಗೆ ಬಂತು. ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದ ದಿನವಾಗಿತ್ತು. ಗೇಣಿದಾರರನ್ನು ಮಾಲೀಕರನ್ನಾಗಿ ಮಾಡಿದ ಕಾಯ್ದೆ ಅದು. ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದರು ಎಂದು ಸಿದ್ದರಾಮಯ್ಯ ಅವರು ಭೂಸುಧಾರಣೆ ಕಾಯ್ದೆಯ ಜಾರಿಯಾದ ಬಗ್ಗೆ ವಿವರಿಸಿದರು.
ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆ ಅದಾಗಿತ್ತು. 79A ನಲ್ಲಿ ಕೃಷಿಯೇತರ ಆದಾಯ 25 ಲಕ್ಷಕ್ಕಿಂತ ಮೀರಿರಬಾರದು. 79 B ನಲ್ಲಿ ರೈತರಲ್ಲದೇ ಬೇರೆ ಯಾರೂ ಕೃಷಿ ಭೂಮಿ ಖರೀದಿ ಮಾಡೊ ಹಾಗಿಲ್ಲ ಎಂದು ಮಾಡಿದ್ದರು. 79 C ನಲ್ಲಿ ಅಫಡವಿಟ್ನಲ್ಲಿ ಸುಳ್ಳಿದ್ದರೆ ಶಿಕ್ಷೆ ವಿಧಿಸಲು ಅವಕಾಶ ಇತ್ತು ಎಂದರು.
ಈಗ 79A, 79B ,79C, 80 ಎಲ್ಲಾ ಸೆಕ್ಷನ್ಗಳನ್ನು ಸಂಪೂರ್ಣ ರದ್ದು ಮಾಡಿದ್ದಾರೆ. 63ಗೆ ತಿದ್ದುಪಡಿ ಮಾಡಿದ್ದಾರೆ. 79A, 79B ಸೆಕ್ಷನ್ ಅಡಿ ಕೋರ್ಟ್ಗಳಲ್ಲಿ ಕೆಲವು ಕೇಸ್ ನಡೆಯುತ್ತಿದ್ದವು. ಆ ಕೇಸ್ಗಳನೆಲ್ಲಾ ವಜಾ ಮಾಡಿದ್ದಾರೆ. 3814 ಒಟ್ಟು ಪ್ರಕರಣಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿದ್ದವು. ಆ ಕೇಸ್ ಗಳನ್ನೆಲ್ಲಾ ವಜಾ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಂದೊಂದು ಪ್ರಕರಣ 4 ಎಕರೆ ಇದೆ ಅನ್ನೊಂಡ್ರೂ 52,000 ಎಕರೆ ಆಯ್ತು. 5 ರಿಂದ 50000 ಕೋಟಿ ರೂ.ಬೆಲೆ ಬಾಳುವ ಜಮೀನು. ಈಗ ಈ ಕೇಸ್ಗಳು ನಡೆಯೋದಿಲ್ಲ, ಎಲ್ಲಾ ವಜಾ ಮಾಡಿದ್ದಾರೆ. ಇದು ಈ ಸರ್ಕಾರದ ಘನ ಕಾರ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರವನ್ನು ಟೀಕಿಸಿದ್ದಾರೆ.