ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಪರವಾನಿಗೆ ರದ್ದು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ನಿಯಂತ್ರಣ  ಮೀರಿ ಹೆಚ್ಚಾಗುತ್ತಿದೆ. ಇದೇ ವೇಳೆ ಕೊರೊನಾ ಸೋಂಕಿತರು ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ  ಘಟನೆಗಳೂ ಸಂಭವಿಸುತ್ತಿವೆ. ವೈದ್ಯರು ಮತ್ತು ದಾದಿಗಳು ಕೊರೊನಾಕ್ಕೆ ಹೆದರಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ  ಪರಿಗಣಿಸಿರುವ ಸರಕಾರ  ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ರೋಗಿಗಳಿಗೆ ಪೂರಕ ಚಿಕಿತ್ಸೆ ನೀಡಲು ವೈದ್ಯರ ಕೊರತೆಯೂ ಉಂಟಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು, ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹಿಂದೇಟು ಹಾಕುವ, ಚಿಕಿತ್ಸೆ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿರುವ ವೈದ್ಯರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೋಗಿಗಳಿಗೆ ಚಿಕಿತ್ಸೆ ನೀಡದೆಯೇ ತಪ್ಪಿಸಿಕೊಳ್ಳುವ ವೈದ್ಯರು ಮತ್ತು ದಾದಿಯರ ಲೈಸೆನ್ಸ್ ಅನ್ನು ರದ್ದುಗೊಳಿಸುವುದಾಗಿಯೂ ಅಶ್ವತ್ಥ್ ನಾರಾಯಣ್ ಅವರು ಎಚ್ಚರಿಕೆ ನೀಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ತಕ್ಷಣ ವೃತ್ತಿಯಿಂದ ಬಿಡುಗಡೆ ಮಾಡಬೇಕೆಂದು ಮೆಡಿಕಲ್ ಕೌನ್ಸಿಲ್ ಮತ್ತು ರಾಜ್ಯದ ನರ್ಸ್ ಕೌನ್ಸಿಲ್ ಗೆ ಸೂಚನೆ ನೀಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಕೊರೋನಾ ವ್ಯಾಪಿಸುವ ಪ್ರಮಾಣ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡುವ ಕೆಲಸವನ್ನು ವೈದ್ಯರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರೂ ಸರಕಾರದ ಜೊತೆಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸಲು ಅವರು ಸೂಚಿಸಿದ್ದಾರೆ. ಅಲ್ಲದೆ ನಿಯಂತ್ರಣಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ ವೈದ್ಯರು, ದಾದಿಯರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ಕೈ ಮೀರಿ ಹೋಗುವ ಮೋದಲೇ ವೈದ್ಯಕೀಯ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಚಿಕಿತ್ಸೆಗೆ ತೊಡಗಿದಲ್ಲಿ ಉತ್ತಮ. ಬದಲಾಗಿ ಕರ್ತವ್ಯ ನಿರ್ವಹಿಸದೆ  ಲೋಪ ಎಸಗಿದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ. ಆದ್ದರಿಂದ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ಎಂದು ಡಿಸಿಎಂ ಆದೇಶ ನೀಡಿದ್ದಾರೆ.

error: Content is protected !!
Scroll to Top