ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿ ವಿಶ್ವ ವಿಖ್ಯಾತಿಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಸಂಸ್ಥೆಯು ತಮ್ಮ ಮುಂದಿನ ಸಂಯೋಜನೆಯು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸಹಯೋಗ, ಪ್ರದರ್ಶನದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಕೊರೊನ ಯಕ್ಷ ಜಾಗೃತಿ ಬೊಂಬೆಯಾಟ ಪ್ರದರ್ಶನ ವನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶ ವಿದೇಶಗಳಲ್ಲಿ ಪ್ರಚುರಪಡಿಸುವ ಕಾರ್ಯದ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಕಣ್ಣಿಗೆ ಕಾಣದ ಸೂಕ್ಷ್ಮ ವೈರಾಣುಗಳಿಂದ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುವ ಕೊರೊನಾ ಎಂಬ ಮಾಹಾಮಾರಿಯು ಕಳೆದ ಆರು ತಿಂಗಳುಗಳಿಂದ ಇಡೀ ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡಿದೆ. ಇದರಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳು ಆತಂಕಕ್ಕೊಳಗಾಗಿವೆ.
ಈ ಮಹಾಮಾರಿಗೆ ಔಷಧ ಅಥವಾ ಲಸಿಕೆ ಕಂಡು ಹಿಡಿಯುವಲ್ಲಿಯ ತನಕ ಪ್ರತಿಯೊಬ್ಬರು ಸರಕಾರ ಅಥವಾ ಆರೋಗ್ಯ ಇಲಾಖೆ ಆದೇಶಿಸುವ, ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ, ಸರಕಾರಗಳು, ವೈದ್ಯರು, ದಾದಿಯರು, ಪೋಲಿಸರು ಹಾಗೂ ಸಾಮಾಜಿಕ ಕಾರ್ಯಕರ್ತರು ಹಗಲಿರುಳು ಈ ಮಹಾಮಾರಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕಾರ್ಯಗಳು ವಿವಿಧ ರೀತಿಯಲ್ಲಿ ವಿವಿಧ ಮೂಲಗಳಿಂದ ನಡೆಯುತ್ತಿವೆ.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಯಕ್ಷಗಾನ ಬೊಂಬೆಯಾಟದ ಮೂಲಕ ಬೇರೆ ಬೇರೆ ಭಾಷೆಗಳಲ್ಲಿ, ದೇಶ – ವಿದೇಶಗಳಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವೇ ಕೊರೊನಾ ಯಕ್ಷ ಜಾಗೃತಿ.
ಭಾರತೀಯ ಪುರಾಣದ ಪರಿಕಲ್ಪನೆಯಡಿಯಲ್ಲಿ ಯಕ್ಷಗಾನ ಕಲೆ ಹಾಗೂ ಯಕ್ಷಗಾನ ಬೊಂಬೆಗಳ ಮೂಲಕ ಕೊರೊನಾ ರೋಗದ ತಡೆಗಟ್ಟುವಿಕೆಗಾಗಿ ವಹಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ದೇಶ – ವಿದೇಶಗಳ ಆಬಾಲವೃದ್ಧರಿಗೂ ತಲುಪಿಸುವ ಮಹತ್ವದ ಉದ್ದೇಶ ಇಲ್ಲಿಯದು.