ಕಾರ್ಕಳ : ಪತ್ರಕರ್ತ ದಿ. ಡಾ. ಶೇಖರ್ ಅಜೆಕಾರು ಅವರೊಂದಿಗೆ ದೀರ್ಘಕಾಲದ ಒಡನಾಟವಿತ್ತು. ಅವರ ಜೀವನಶೈಲಿಯೇ ವಿಭಿನ್ನವಾಗಿತ್ತು. ಸಮಾಜದ ಬಗ್ಗೆ ಅವರಿಗಿದ್ದ ಪರಿಕಲ್ಪನೆ, ವಿಚಾರವಂತಿಕೆ ಹಾಗೂ ಸೃಜನಶೀಲತೆ ಗಮನಾರ್ಹವಾಗಿತ್ತು. ಐಶ್ವರ್ಯವಿಲ್ಲದೆಯೂ ಉತ್ತಮ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಾಣೂರಿನ ರಾಜರಾಜೇಶ್ವರಿ ನ್ಯಾಷನಲ್ ಸ್ಕೂಲ್-ಕಾಲೇಜು ಮೈದಾನದಲ್ಲಿ ಆ.6ರಂದು ನಡೆದ 2025-26ನೇ ಸಾಲಿನ ಡಾ. ಶೇಖರ್ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಕುಂಟಾಡಿ ದಯಾನಂದ ಪೈ ಅವರಿಗೆ ಡಾ.ಶೇಖರ್ ಅಜೆಕಾರು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿ. ಡಾ. ಶೇಖರ್ ಅಜೆಕಾರು ಅವರ ಧರ್ಮಪತ್ನಿ ತಾರಾ ಅವರಿಗೆ ಕಿರು ಆರ್ಥಿಕ ನೆರವು ನೀಡಲಾಯಿತು.

ಕರ್ನಾಟಕ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಕೇವಲ ಪತ್ರಕರ್ತರಾಗಿರದೆ ಸಾಹಿತ್ಯ ಹಾಗೂ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸುವ ಕೆಲಸವಾಗಬೇಕು ಎಂದ ಅವರು ಶೇಖರ್ ಅಜೆಕಾರ್ ಅವರನ್ನು ಸ್ಮರಿಸುವ ಸಲುವಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಜನ್ಮದಿಂದ ಯಾರು ದೊಡ್ಡವರಲ್ಲ ಕರ್ಮದಿಂದ ದೊಡ್ಡವರಾಗುತ್ತೇವೆ. ಅದೆಷ್ಟೋ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಪುಣ್ಯಾತ್ಮ ಶೇಖರ್ ಅಜೆಕಾರು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಸ್ವಾಗತಿಸಿದರು.
ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ತಕ್ಷ ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಮಾತನಾಡಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ನಜೀರ್ ಪೊಲ್ಯ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಮುಂಡ್ಕೂರು, ತಾಲೂಕು ಸಂಘದ ಕೋಶಾಧಿಕಾರಿ ಸತೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿದ್ಧಾಪುರ ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು. ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸಚ್ಚೇರಿಪೇಟೆ ವಂದಿಸಿದರು.
























