ನಟ ದರ್ಶನ್‌ಗೆ ಮತ್ತೊಂದು ಶಾಕ್ : ಮಾಫಿ ಸಾಕ್ಷಿಯಾಗಲು ರೆಡಿಯಾದ ಮತ್ತಿಬ್ಬರು ಆರೋಪಿಗಳು

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಿದ್ದು, ಪ್ರಕರಣದ 14ನೇ ಆರೋಪಿ(ಎ-14) ಪ್ರದೋಷ್ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಇಬ್ಬರು ಕೋರ್ಟ್‌ನಲ್ಲಿ ಸತ್ಯ ಹೇಳಲು ಮುಂದಾಗಿದ್ದು, ದರ್ಶನ್‌ಗೆ ಬಿಗ್ ಶಾಕ್ ನೀಡಿದ್ದಾರೆ.

ಪ್ರಕರಣದ ಕುರಿತು ಸತ್ಯಾಂಶಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ಪ್ರದೋಷ್ ಈಗಾಗಲೇ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಸಹ ಆರಂಭವಾಗಿದೆ. ಇದೀಗ ಮತ್ತಿಬ್ಬರು ಮಾಫಿ ಸಾಕ್ಷಿಯಾಗಲು ನಿರ್ಧರಿಸಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಬೇಲ್ ಸಿಗದೆ ಜೈಲಿನಲ್ಲಿ ಪರದಾಡುತ್ತಿರುವ ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಪ್ರದೋಷ್, ತನ್ನನ್ನು ‘ಮಾಫಿ ಸಾಕ್ಷಿ’ ಆಗಿ ಪರಿಗಣಿಸುವಂತೆ ಕೋರಿ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರದೋಷ್ ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ವೇಳೆ ಪ್ರದೋಷ್ ಪರ ವಕೀಲ ದಿವಾಕರ್, ಮೊದಲು ನಮ್ಮ ಕಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿ. ಆ ನಂತರ ಪ್ರಾಸಿಕ್ಯೂಷನ್ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇನ್ನು ನಟ ದರ್ಶನ್ ಅವರ ಆಪ್ತ, 10ನೇ ಆರೋಪಿ ವಿನಯ್ ರಾಘವೇಂದ್ರ ಅಲಿಯಾಸ್ ವಿನಯ್ ಹಾಗೂ 8ನೇ ಆರೋಪಿ ರವಿಶಂಕರ್ ಕೂಡ ತಮ್ಮನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅವರ ಪರ ವಕೀಲರು ಮಧ್ಯಾಹ್ನದ ವೇಳೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಆದರೆ, ಪ್ರದೋಷ್ ಪರ ವಕೀಲರು ತಮ್ಮ ಅರ್ಜಿಯೊಂದಿಗೆ ಇತರ ಆರೋಪಿಗಳ ಮನವಿಯನ್ನು ಸೇರಿಸದಂತೆ ಕೋರಿದ ಕಾರಣ, ನ್ಯಾಯಾಲಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಿದೆ.

















































error: Content is protected !!
Scroll to Top