ಖಾಸಗಿ ದೇವಸ್ಥಾನವನ್ನು ಸಾಮಾನ್ಯವಾಗಿ ದೇವಸ್ಥಾನವನ್ನು ಸ್ಥಾಪಿಸಿದ ಸ್ಥಾಪಕರ ಕುಟುಂಬ ಅಥವಾ ವಂಶಪಾರಂಪರ್ಯ ಟ್ರಸ್ಟಿಗಳು ನಿರ್ವಹಿಸುತ್ತಾರೆ. ಖಾಸಗಿ ದೇವಸ್ಥಾನದ ಆಡಳಿತ ವಿಚಾರದ ಬಗ್ಗೆ ಸರಕಾರಕ್ಕೆ ಸಂಪೂರ್ಣವಾಗಿ ಹಸ್ತಾಕ್ಷೇಪ ನಡೆಸುವ ಅಧಿಕಾರ ಇರುವುದಿಲ್ಲವಾದರೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2008ರಲ್ಲಿ ನಮ್ಮ ಭಾರತದ ಸರ್ವೋಚ್ಛ ನ್ಯಾಯಾಲಯವು ಸರಕಾರಕ್ಕೆ ನೀಡಿದ ಕೆಲವು ನಿರ್ದೇಶನಗಳನ್ನು ಪರಿಶೀಲಿಸಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಸಮಿತಿಯ ವರದಿಯನ್ನು ಮತ್ತು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳನ್ನು ಪರಿಗಣಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಾನೂನನ್ನು ತಿದ್ದುಪಡಿಗೊಳಿಸಿರುತ್ತದೆ.
ಮಠಾದಿಪತಿಗಳು ಮಠಗಳ ಮುಖ್ಯಸ್ಥರಾಗಿರುವುದರಿಂದ ಮತ್ತು ಮಠಗಳ ಆಡಳಿತವು ಮಠಾದಿಪತಿಗಳ ನಿರ್ವಹಣೆಯಲ್ಲಿರುವುದರಿಂದ ಮಠಗಳನ್ನು ಮತ್ತು ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಈ ಕಾನೂನಿನ ಚೌಕಟ್ಟಿನ ವ್ಯಾಪ್ತಿಯಿಂದ ಹೊರಗಿಡಲಾಗಿರುತ್ತದೆ. ಮಠಗಳನ್ನು ಹೊರತುಪಡಿಸಿ ಭಕ್ತಾಧಿಗಳಿಂದ ಮತ್ತು ಸಾರ್ವಜನಿಕರಿಂದ ವಂತಿಗೆ ಅಥವಾ ಹಣವನ್ನು ಸ್ವೀಕರಿಸುವ ಯಾವುದೇ ಮತ್ತು ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳು ಈ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರಗಳಿಗೆ ಅನುಗುಣವಾಗಿ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅಂದರೆ ಖಾಸಗಿ ದೇವಸ್ಥಾನಗಳ ಆಡಳಿತ ವ್ಯವಸ್ಥೆಯ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಪಟ್ಟವರ ವಿರುದ್ದ ಹಣಕಾಸಿನ ಅಕ್ರಮ, ದುರುಪಯೋಗ ಮತ್ತಿತರ ಗಂಭೀರ ಆಡಳಿತಾತ್ಮಕ ಲೋಪದೋಷಗಳ ಅಥವಾ ಸಮಸ್ಯೆಗಳ ಅಪವಾದ ಅಥವಾ ಆರೋಪಗಳು ಕೇಳಿ ಬಂದಲ್ಲಿ ಸರಕಾರವು ತನ್ನ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಖಾಸಗಿ ದೇವಸ್ಥಾನದ ವ್ಯವಹಾರಗಳಿಗೆ ಸಂಬಂಧಪಟ್ಟ ಲೆಕ್ಕಪತ್ರಗಳನ್ನು ಪರಿಶೀಲಿಸಿ ದೇವಸ್ಥಾನದ ಹಣ ಅಥವಾ ಯಾವುದೇ ಸ್ವತ್ತು ಅಥವಾ ಆಸ್ತಿಯ ದುರುಪಯೋಗ, ವಂಚನೆ ಮತ್ತು ಭ್ರಷ್ಟಚಾರ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಹೊಂದಿರುತ್ತದೆ. ಮಾತ್ರವಲ್ಲದೇ ದೇವಸ್ಥಾನದ ಆಡಳಿತ ವರ್ಗದವರು ಅಥವಾ ಟ್ರಸ್ಟಿಗಳು ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡ ಸಂದರ್ಭದಲ್ಲಿ ಸರಕಾರವು ದೇವಸ್ಥಾನದ ಆಡಳಿತ ಸಮಿತಿ ಅಥವಾ ಟ್ರಸ್ಟ್ ಅನ್ನು ರದ್ದು ಪಡಿಸಿ ದೇವಸ್ಥಾನದ ನಿರ್ವಹಣೆ ಬಗ್ಗೆ ಸರಕಾರದ ವತಿಯಿಂದ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಬಹುದಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಪ್ರಕಾರ ಖಾಸಗಿ ದೇವಸ್ಥಾನದ ಉದ್ಧೇಶವು ಧಾರ್ಮಿಕ ಸೇವೆಯಾಗಿರುವುದರಿಂದ ಅದರ ಸ್ಥಾಪಕ, ಕುಟುಂಬ ಅಥವಾ ಟ್ರಸ್ಟ್ ಕಾನೂನಿನ ಪ್ರಕಾರ ನಿರ್ವಹಿಸಿಕೊಂಡು ಬರುವ ಸಂದರ್ಭದಲ್ಲಿ ಪಾರದರ್ಶಕತೆ, ಪ್ರಾಮಾಣೀಕತೆ ಮತ್ತು ಸಂಪ್ರದಾಯಕ್ಕೆ ಮಹತ್ವವನ್ನು ನೀಡಬೇಕಾಗಿರುತ್ತದೆ ಮತ್ತು ಸ್ಥಾಪಕರ ಇಚ್ಛೆಗೆ ಅನುಗುಣವಾಗಿ ಅವರ ಆಶಯ ಮತ್ತು ಶರತ್ತುಗಳನ್ನು ಗೌರವಿಸಿ ಆಡಳಿತವನ್ನು ನಡೆಸಬೇಕಾಗಿರುತ್ತದೆ. ಪ್ರತಿದಿನದ ಪೂಜೆ, ನೈವೇದ್ಯ, ಉತ್ಸವ ಮತ್ತು ವಿಶೇಷ ಆಚರಣೆಗಳನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರುವ ಜವಾಬ್ದಾರಿಯು ಆಡಳಿತವನ್ನು ನಿರ್ವಹಿಸುವವರ ಮೇಲಿರುತ್ತದೆ. ದೇವಸ್ಥಾನವು ಭಕ್ತಾಧಿಗಳಿಂದ ಪಡೆಯುವ ಯಾವುದೇ ದೇಣಿಗೆ, ಕಾಣಿಕೆ (ನಗದು ಅಥವಾ ವಸ್ತು), ಬಾಡಿಗೆ ಹಾಗೂ ಇತರ ಆದಾಯದ ದಾಖಲೆಯನ್ನು ಸರಿಯಾಗಿ ನಿರ್ವಹಿಸಿ ಪ್ರತಿಯೊಂದು ಖರ್ಚು ವೆಚ್ಚಗಳಿಗೆ ದಾಖಲೆ ಮತ್ತು ರಶೀದಿಗಳನ್ನು ಇಟ್ಟುಕೊಳ್ಳಬೇಕಾಗಿರುತ್ತದೆ. ಒಂದು ವೇಳೆ ದೇವಸ್ಥಾನದ ಆಡಳಿತವು ಟ್ರಸ್ಟ್ ಮೂಲಕ ನಿರ್ವಹಿಸುತ್ತಿದ್ದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ಆಸ್ತಿ ಅಂದರೆ ಭೂಮಿ, ಕಟ್ಟಡ, ಚಿನ್ನಾಭರಣ, ವಾಹನ ಮತ್ತು ಇತರ ಯಾವುದೇ ಮತ್ತು ಎಲ್ಲಾ ವಸ್ತುಗಳನ್ನು ಸರಕಾರದ ಅಥವಾ ಟ್ರಸ್ಟ್ನ ಅನುಮತಿಯಿಲ್ಲದೆ ಮಾರಾಟ ಅಥವಾ ವರ್ಗಾವಣೆ ಮಾಡುವ ಅಧಿಕಾರವನ್ನು ದೇವಸ್ಥಾನದ ಆಡಳಿತವು ಹೊಂದಿರುವುದಿಲ್ಲ. ಒಟ್ಟಾರೆ ಖಾಸಗಿ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಟ್ರಸ್ಟ್‌ಗೆ ಸಂಬಂಧಪಟ್ಟ ಟ್ರಸ್ಟಿಗಳು ತಮ್ಮ ವೈಯುಕ್ತಿಕ ಲಾಭಕ್ಕಾಗಿ ದೇವಸ್ಥಾನದ ಆಸ್ತಿಯನ್ನು ಬಳಸದೆ ದೇವಸ್ಥಾನದ ಹಿತಾಸಕ್ತಿಯನ್ನು ಕಾಪಾಡಬೇಕಾಗಿರುತ್ತದೆ. ಮಾತ್ರವಲ್ಲದೇ ಆದಾಯ ಮತ್ತು ವೆಚ್ಚದ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಂಡು ಭಕ್ತರಿಂದ ಬಂದ ಹಣವನ್ನು ದೇವಸ್ಥಾನದ ಅಭಿವೃಧ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗಷ್ಟೇ ಬಳಸಿ ಎಲ್ಲಾ ಭಕ್ತರೊಂದಿಗೆ ಸಮಾನವಾಗಿ ವರ್ತಿಸಬೇಕಾಗಿರುವುದು ಪ್ರತಿಯೊಂದು ದೇವಸ್ಥಾನದ ಆಡಳಿತ ವರ್ಗ ಹಾಗೂ ಟ್ರಸ್ಟ್‌ಗೆ ಸಂಬಂಧಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೇಲ್ಕಾಣಿಸಿದ ಕಾನೂನಿನ ಉದ್ದೇಶ ಮತ್ತು ನಿಯಮಾನುಸಾರಗಳಿಗೆ ವ್ಯತಿರಿಕ್ತವಾಗಿ ವರ್ತಿಸುವ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ದೇವಸ್ಥಾನಗಳ ಆಡಳಿತದಾರರು ವೈಯುಕ್ತಿಕ ನೆಲೆಯಲ್ಲಿ ಕಾನೂನಿನ ಕ್ರಮವನ್ನು ಎದುರಿಸಲು ಹೊಣೆಗಾರರಾಗುತ್ತಾರೆ.































