ಪ್ರಾಕೃತಿಕ ವಿಕೋಪ ನಿರ್ವಹಣೆ – ಪೂರ್ವಭಾವಿ ಸಭೆ

ಕಾರ್ಕಳ : ರಸ್ತೆಬದಿಯಲ್ಲಿನ ಅನಧಿಕೃತ ಕಟ್ಟಡಗಳು ನಗರದ ಸೌಂದರ್ಯಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದರು.
ಜೂ. 15ರಂದು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಸ್ತೆ ಬದಿಯಲ್ಲಿನ ಅನಧಿಕೃತ ಕಟ್ಟಡಗಳ ಬಗ್ಗೆ ವಿಚಾರಿಸಿದರೆ ಪಂಚಾಯತ್‌ನವರು ಪಿಡಬ್ಲೂಡಿಯವರ ಮೇಲೆ, ಪಿಡಬ್ಲೂಡಿಯವರು ಪಂಚಾಯತ್‌ನವರ ಮೇಲೆ ಜವಾಬ್ದಾರಿ ಎಂದು ಹೇಳುತ್ತಾರೆ. ಬೀದಿ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರದ್ದು ಯಾವುದೇ ಸಮಸ್ಯೆಯಿಲ್ಲ. ಅವರು ಬೆಳಗ್ಗೆ ಬಂದು ಸಂಜೆ ಹೋಗುತ್ತಾರೆ. ಆದರೆ ಕಟ್ಟಡ ನಿರ್ಮಾಣ‌ ಮಾಡಿದವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ಪಿಡಬ್ಲೂಡಿ ಅಧಿಕಾರಿ ತ್ರಿನೇಶ್ಚರ್ ಈ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು ಯಾರ ವ್ಯಾಪ್ತಿಗೊಳಪಡುತ್ತಾದೆಯೋ ಅವರು ತೆರವು ಮಾಡುವ ಅಧಿಕಾರವಿರುತ್ತದೆ. ಈ ನಿಟ್ಟಿನಲ್ಲಿ ನಾವು ಮತ್ತು ಪಿಡಿಓನವರು ಕಾರ್ಯನಿರ್ವಹಿಸುತ್ತೇವೆ ಎಂದರು.

ಮೆಸ್ಕಾಂ ಇಲಾಖೆಯಲ್ಲಿ ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ 4 ಹೆಚ್ಚುವರಿ ವಾಹನ ಹಾಗೂ 24 ಸಿಬ್ಬಂದಿ ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನು ಎಪ್ರಿಲ್ ತಿಂಗಳಲ್ಲಿ 900ಕ್ಕೂ ಅಧಿಕ ಅಪಾಯಕಾರಿ ಮರಗಳ ರೆಂಬೆಗಳನ್ನು ಕಟಾವು ಮಾಡಲಾಗಿದೆ. ಹೆಬ್ರಿ ಭಾಗ ಹಾಗೂ ಮುಡಾರು, ಹೊಸ್ಮಾರು ಭಾಗದಲ್ಲಿ ಮರಗಳು ಹೇರಳವಾಗಿರುವುದರಿಂದ ಸ್ವಲ್ಪ ಸವಾಲಾಗಿ ಪರಿಣಮಿಸಿದೆ ಎಂದು ಮೆಸ್ಕಾ ಅಧಿಕಾರಿ ತಿಳಿಸಿದರು. ಮೆಸ್ಕಾಂ ಅಧಿಕಾರಿಗಳು ಮಳೆಗಾಲದಲ್ಲಿ ರಜೆ ಹಾಕುವಂತಿಲ್ಲ ಎಂದು ಶಾಸಕರು ಸೂಚಿಸಿದರು.

ಒಂದೇ ವಾಹನ – ಸಿಬ್ಬಂದಿ ಕೊರತೆ
ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್‌ ಮಾತನಾಡಿ, ಕಾರ್ಕಳ – ಹೆಬ್ರಿ ಎರಡೂ ತಾಲೂಕುಗಳೂ ಕಾರ್ಕಳ ಅಗ್ನಿಶಾಮಕ ಠಾಣೆಯನ್ನೇ ಅವಲಂಬಿಸಿದೆ. ಆದರೆ, ನಮ್ಮ ಇಲಾಖೆಯಲ್ಲಿ ಒಂದೇ ವಾಹನವಿರುವುದು ಅಲ್ಲದೆ ನೀರಿನ ಸಮಸ್ಯೆಯೂ ಇದೆ. ಇದರಿಂದಾಗಿ ಏಕಕಾಲದಲ್ಲಿ ಅವಘಡ ಸಂಭವಿಸಿದಾಗ ಸಮಸ್ಯೆಯಾಗುತ್ತದೆ. ಅಲ್ಲದೆ ಸಿಬ್ಬಂದಿಯ ಕೊರತೆಯಿದ್ದು, ರಜೆ ಪಡೆಯದೆ ಕೆಲಸ‌ ಮಾಡುತ್ತಿದ್ದೇವೆ ಎಂದ ಅವರು ಮಳೆಗಾಲದ ನಿರ್ವಹಣೆಗಾಗಿ ಬೋಟ್ ಮತ್ತು ಲೈಫ್ ಜಾಕೆಟ್ ಇದೆ. ಆದರೆ ಬೋಟ್‌ ಒಂದೇ ಇದ್ದು ಏಕಕಾಲದಲ್ಲಿ ನೆರೆ ಸಂಭವಿಸಿದಲ್ಲಿ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಸಂದೀಪ್‌ ಕುಡ್ವ ಮಾತನಾಡಿ, ನೆರಪೀಡಿತ ಕೇಂದ್ರಕ್ಕೆ ಸಂಬಂಧಿಸಿಂತೆ ಉಪಕೇಂದ್ರ ಮಟ್ಟದಲ್ಲಿ ಈಗಾಗಲೇ ಟೀಮ್ ಮಾಡಿದ್ದೇವೆ. ಸಾಂಕ್ರಾಮಿಕ ರೋಗದ ಕುರಿತಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೊದಲ ಆದ್ಯತೆಯಿರಲಿ
ಅರಣ್ಯ ಇಲಾಖಾಧಿಕಾರಿಗಳು ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದಾಗ ಅಂಗನವಾಡಿ, ಶಾಲಾ ಆವರಣದಲ್ಲಿನ ಅಪಾಯಕಾರಿ ಮರ ತೆರವುಗೊಳಿಸುವ ಬಗ್ಗೆ ಮೊದಲ ಆದ್ಯತೆ ಇರಲಿ ಎಂದ ಶಾಸಕರು ಈ ಬಗ್ಗೆ ಶಿಕ್ಷಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಎಂದು ಸೂಚಿಸಿದರು.

ಪುರಸಭಾ ವ್ಯಾಪ್ತಿಯ ಸ್ವಚ್ಛತೆಯ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಈಗಾಗಲೇ 21 ಕಡೆ ಚರಂಡಿ ಸ್ವಚ್ಛತೆ ಮಾಡಲಾಗಿದೆ, ಇನ್ನು ಒಂದು ತಿಂಗಳಲ್ಲಿ ಪೂರ್ತಿಗೊಳಿಸಲಾಗುವುದು.

ಹಳ್ಳ ದಾಟಿ ಬರುವ ವಿದ್ಯಾರ್ಥಿಗಳ ಸಂಖ್ಯೆ – 84
ಶಿಕ್ಷಣಾಧಿಕಾರಿ ಗಿರಿಜಮ್ಮ ಮಾತನಾಡಿ, ಶಾಲಾ‌ ಪ್ರಾರಂಭದ ಮುಂಚಿತವಾಗಿಯೇ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಇನ್ನು ಈ ಬಾರಿ ತಾಲೂಕಿನಲ್ಲಿ ದುರಸ್ತಿಗಾಗಿ 51 ಶಾಲೆಗಳ ಪಟ್ಟಿ ಮಾಡಲಾಗಿದೆ. ಕಾಲು ಸಂಕದಲ್ಲಿ ದಾಟಿ ಬರುವ 233 ವಿದ್ಯಾರ್ಥಿಗಳು ಹಾಗೂ 84 ವಿದ್ಯಾರ್ಥಿಗಳು ಹಳ್ಳ ದಾಟಿ ಬರುತ್ತಿದ್ದಾರೆ ಎಂದರು. ಈ ಸಂದರ್ಭ ಮಾತನಾಡಿದ ಶಾಸಕರು ಕಾರ್ಕಳದಲ್ಲಿ ಸಾಧಾರಣ ಎಲ್ಲಾ ಭಾಗದಲ್ಲಿ ಕಾಲುಸಂಕ ನಿರ್ಮಾಣ ಮಾಡಲಾಗಿದೆ ಆಗಿದಾಗ್ಯೂ ಹಳ್ಳ ದಾಟಿ ಬರುವ ವಿದ್ಯಾರ್ಥಿಗಳಿದ್ದಾರೆ ಎಂದರೆ ಅವರ ಮಾಹಿತಿ ನೀಡಿ ಎಂದಾಗ ಶಿಕ್ಷಣಾಧಿಕಾರಿಯವರು ಇದು ಶಾಲೆಯವರು ನೀಡಿದ ಲೆಕ್ಕ ಇನ್ನೊಮ್ಮೆ ಅವರೊಂದಿಗೆ ಮಾತನಾಡಿ ತಿಳಿಸುತ್ತೇವೆ ಎಂದರು.

ಮೂರು ಶಿಥಿಲಾವಸ್ಥೆ ಶಾಲೆ
ಇನ್ನಾ ಪಂಚಾಯತ್ ವ್ಯಾಪ್ತಿಯ ಸ.ಕಿ.ಪ್ರಾ. ಕೈನಾಲು, ಮಾಳ ಕೂಡಬೆಟ್ಟು ಪ್ರೌಢಶಾಲೆ ಮತ್ತು ಕೆರ್ವಾಶೆ ಶಾಲೆಗಳು ಶಿಥಿಲಾವಸ್ಥೆಯಲ್ಲಿದೆ ಎಂದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಶಾಸಕರು ಅಪಾಯಕಾರಿ ಇದ್ದಲ್ಲಿ ಮಕ್ಕಳನ್ನು ಹತ್ತಿರದ ಶಾಲೆಗೆ ಸ್ಥಳಾಂತರಿಸಿ ಎಂದು ಸೂಚಿಸಿದರು.

ಬಿತ್ತನೆ ಬೀಜ‌ದ ಕೊರತೆಯಿಲ್ಲ
ಕೃಷಿ ಇಲಾಖಾಧಿಕಾರಿ ಮಾತನಾಡಿ ಬಿತ್ತನೆ ಬೀಜ‌ದ ಕೊರತೆಯಿಲ್ಲ, ಈ ಬಾರಿ 250 ಕ್ವಿಂಟಾಲ್ ಬಿತ್ತನೆ ಬೀಜ ಬಂದಿದ್ದು, ಈಗಾಗಲೇ 102 ಕ್ವಿಂಟಾಲ್ ಬೀಜವನ್ನು ರೈತರು ಕೊಂಡೊಗಿದ್ದಾರೆ‌. ಕೆಲವಡೆ ಉಳುಮೆ ಪ್ರಾರಂಭವಾಗಿದೆ ಎಂದರು.

ನೋಡೆಲ್‌ ಅಧಿಕಾರಿ ನೇಮಕ
ತಾಲೂಕಿನ ಪ್ರತಿ ಹಾಸ್ಟೆಲ್‌ಗಳಿಗೆ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಅವರ ಮೂಲಕ ಹಾಸ್ಟೆಲ್‌ಗಳ ವ್ಯವಸ್ಥೆಯನ್ನು ನೋಡಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖಾಧಿಕಾರಿಗೆ ತಿಳಿಸಿದರು.
ಪಿಡಬ್ಲೂಡಿ ರಸ್ತೆಗಳ ನಿರ್ವಹಣೆ, ಗ್ರಾಮೀಣ‌ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಸಮಸ್ಯೆ, ಪಶುಸಂಗೋಪಣೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪ್ರತಿಯೊಂದು ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ‌ ಮಾಡಬೇಕು, ಸಮಸ್ಯೆಗೆ ತಕ್ಷಣ ಸ್ಪಂದನೆ ನೀಡಬೇಕು, ಅವಘಡದ ಬಗ್ಗೆ ತಕ್ಷಣ‌ ಮೇಲಾಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು ಹಾಗೂ ಮುಂಜಾಗ್ರತಾ ಕ್ರಮಕ್ಕೆ ಸಂಬಂಧಿಸಿದಂತೆ ಸ್ಥಳೀಯವಾದ ಸಾಮಾಜಿಕ ಸಂಘಟನೆಗಳಗೊಂದಿಗೆ ಸಂಪರ್ಕ ಹೊಂದಿಕೊಳ್ಳಿ. ಯಾವುದೇ ಕಾರಣಕ್ಕೂ ಕರ್ತವ್ಯದಿಂದ ವಿಮುಖರಾಗದೆ ಕಾರ್ಯನಿರ್ವಹಿಸಿ ಎಂದು ಶಾಸಕ ಸುನಿಲ್‌ ಕುಮಾರ್‌ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಕಳ ತಹಶಿಲ್ದಾರ್ ಪ್ರದೀಪ್ ಆರ್., ಹೆಬ್ರಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ತಾ.ಪಂ.‌ ಇಒ ಪ್ರಶಾಂತ್ ರಾವ್ ವೇದಿಕೆಯಲ್ಲಿದ್ದರು. ಸುಮಾರು 44 ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.























error: Content is protected !!
Scroll to Top