ಹೆಬ್ರಿ : ಹೆಬ್ರಿ ಗ್ರಾಮದ ಹೊಸೂರು ಎಂಬಲ್ಲಿ ಜೂಜಾಟದ ಅಡ್ಡೆಗೆ ಪೊಲೀಸರು ಶನಿವಾರ ಸಂಜೆ ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಜೂಜಾಟದಲ್ಲಿ ಪಾಲ್ಗೊಂಡ 15ಕ್ಕೂ ಹೆಚ್ಚು ಮಂದಿ ಪರಾರಿಯಾಗಿದ್ದಾರೆ. ಹೊಸೂರು ಎಂಬಲ್ಲಿ ಟರ್ಪಾಲ್ ಅಳವಡಿಸಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಿ ಹಣವನ್ನು ಪಣವಾಗಿಟ್ಟುಕೊಂಡು ‘ಅಂದರ್ ಬಾಹರ್’ ಇಸ್ಪೀಟ್ ಜೂಜಾಡುತ್ತಿದ್ದ ಜಾಗಕ್ಕೆ ಕಾರ್ಕಳ ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿ ರಾತ್ರಿ 10:45 ರ ಸುಮಾರಿಗೆ ದಾಳಿ ನಡೆಸಿದ್ದರು. ಸ್ಥಳದಲ್ಲಿದ್ದ ವಿಜೇಶ್, ದಸ್ತಗೀರ್ ಮತ್ತು ರೋಹಿತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಜೂಜಾಟದಲ್ಲಿ ತೊಡಗಿರುವುದನ್ನು ಒಪ್ಪಿಕೊಂಡಿರುವ ಬಂಧಿತರು ಸ್ಥಳದಿಂದ ಓಡಿಹೋದ ಇತರ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಂಗಳೂರಿನ ನಿತಿನ್, ಪಡು, ಪಂಪ್ವೆಲ್‌ನ ಕಿಶೋರ್, ಮೂಲ್ಕಿಯ ಸಿದ್ದು ಶೆಟ್ಟಿ, ರಂಗನಾಥ, ರಪೀಕ್, ಇಮ್ರಾನ್, ಬೆಳ್ತಂಗಡಿಯ ನಜೀರ್, ಬರ್ಕೆಯ ಚೇತನ, ಪಾಂಗಾಳದ ಕಿಶೋರ್, ಕಾರ್ಕಳದ ವಿಜಯ ಶೆಟ್ಟಿ, ಜಾರ್ಕಳದ ಮಹೇಶ್, ಭಟ್ಕಳದ ಮಹಾದೇವ ನಾಯ್ಕ ಹಾಗೂ ಕಾರಿನ ಚಾಲಕ ಸೇರಿದಂತೆ ಇತರರು ಸ್ಥಳದಿಂದ ತಲೆಮರೆಸಿಕೊಂಡವರು.
ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ ನಗದು ಹಣ, ಮೊಬೈಲ್ ಫೋನ್‌ಗಳು, ಇಸ್ಪೀಟ್ ಕಾರ್ಡ್‌ಗಳು, ಪೀಠೋಪಕರಣಗಳು ಹಾಗೂ ಜೂಜಾಟಕ್ಕೆ ಬರಲು ಬಳಸಲಾಗಿದ್ದ ಮೂರು ಕಾರು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ; ಮೂವರ ಬಂಧನ, 15 ಮಂದಿ ಪರಾರಿ
























