ಹೆಬ್ರಿ : ಮೇ 24ರ ರಾತ್ರಿ ಹೆಬ್ರಿ ತಾಲೂಕು ಅನಂತನಗರ ಎಸ್ಆರ್‌ಎಸ್ ಶಾಲೆಯ ಬಳಿಯಿರುವ ಕೀರ್ತನ ಪ್ರಭು ಎಂಬವರ ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಕಪಾಟಿನ ಬೀಗವನ್ನು ಒಡೆದು ಲಾಕರ್ ನಲ್ಲಿದ್ದ ಅಂದಾಜು 49,42,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಸುಮಾರು 3,95,000 ರೂ. ಮೌಲ್ಯದ ಬೆಳ್ಳಿ ಆಭರಣ ಮತ್ತು ಸುಮಾರು 6,60,000 ರೂ. ಮೌಲ್ಯದ ಚಿನ್ನದ ಹೊದಿಕೆ ಇರುವ ವಜ್ರದ ಆಭರಣ ಸೇರಿದಂತೆ ಒಟ್ಟು 59,77,000 ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ ಕಳ್ಳರನ್ನು ಹೆಬ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ರಮ್ದೀನ್ ಸಲೀಂ, ಮೂಡುಬಿದಿರೆ ಮಿಜಾರು ಗ್ರಾಮದ ಹರೀಶ್ ಶೆಟ್ಟಿ, ಕಾಸರಗೋಡು ಜಿಲ್ಲೆಯ ನೆಕ್ರಜೆ ಗ್ರಾಮದ ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಮಹಮ್ಮದ್ ಸಫ್ವಾನ್ ಎಂಬವರನ್ನು ದಸ್ತಗಿರಿ ಮಾಡಿ ಕಳವಾದ 37,87,800 ರೂ, ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ 4 ಲಕ್ಷ ರೂ. ಮೌಲ್ಯದ ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಮತ್ತೋರ್ವ ಆರೋಪಿಯ ತಪ್ಪಿಸಿಕೊಂಡಿರುತ್ತಾನೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹೆಬ್ರಿ ಪೊಲೀಸರು ಒಂದೇ ವಾರದಲ್ಲಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ರಿ ಪೊಲೀಸ್ ಠಾಣಾ ಹೆಚ್.ಸಿ. ರಾಜಕುಮಾರ್, ಅವಿನಾಶ್, ಕಿರಣ, ಅಜೆಕಾರು ಪೊಲೀಸ್ ಠಾಣಾ ಹೆಚ್.ಸಿ. ಸತೀಶ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿದ್ದರಾಯಪ್ಪ, ಸಂತೋಷ, ತನಿಖಾ ಸಹಾಯಕರಾಗಿ ಹೆಬ್ರಿ ಪೊಲೀಸ್ ಠಾಣಾ ಹೆಚ್.ಸಿ. ರಘು ಮೊಘವೀರ, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ಶಶಿಕುಮಾರ್, ಕಾರ್ಕಳ ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಶಿವಾನಂದ ಪೂಜಾರಿ ಕಾರ್ಯಾಚರಣೆ ತಂಡದಲ್ಲಿದ್ದರು.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್, ಜಿಲ್ಲಾ ಬೆರಳು ಮುದ್ರೆ ಘಟಕದ ತಜ್ಞೆ ಪೊಲೀಸ್ ಇನ್ಸ್ಪೆಕ್ಟರ್ ಎಲ್. ಮೋಹನ ಕುಮಾರಿ ಸಿಬ್ಬಂದಿ ಸಹಕರಿಸುತ್ತಾರೆ.
ರಬ್ದಿನ್ ಸಲೀಂ 2013ನೇ ಇಸವಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಅನುಕೂಲ ವ್ಯಾಪ್ತಿಯಲ್ಲಿ ನಡೆದ ಆರ್‌ಎನ್ ನಾಯಕ್ ಕೊಲೆ ಕೇಸ್ ಪ್ರಕರಣದಲ್ಲಿ ಆರೋಪಿಯಾಗಿದ್ದು ಅಲ್ಲದೇ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದ ಆರೋಪಿಯಾಗಿರುತ್ತಾನೆ. ಹರೀಶ್ ಶೆಟ್ಟಿ ಮೇಲೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ, ಮಾದಕ ದ್ರವ್ಯ ಸೇವನೆ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿ ಎಸ್‌ಪಿ ಹರಿರಾಮ ಶಂಕರ್ ಆದೇಶದಂತೆ ಉಡುಪಿ ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧಿಕಾರಿ ಸುಧಾಕರ ಎಸ್. ನಾಯಕ್ ನಿರ್ದೇಶನದಂತೆ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಮತ್ತು ಕಾರ್ಕಳ ವೃತ್ತ ಪ್ರಭಾರ ಸಿಪಿಐ ರಾಘವೇಂದ್ರ, ಹೆಬ್ರಿ ಪೊಲೀಸ್ ಠಾಣಾ ಪಿಎಸ್ಐ ರವಿ ಬಿ. ಕೆ. ಮತ್ತು ಚಂದ್ರ ಎ. ಕೆ., ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಪ್ರಸನ್ನ ಎಂ.ಎಸ್., ಶಿರ್ವ ಪೊಲೀಸ್ ಠಾಣಾ ಪಿಎಸ್ಐ ಮಂಜುನಾಥ ಮರಬದ, ಪಡುಬಿದ್ರಿ ಪೊಲೀಸ್ ಠಾಣಾ ಎಎಸ್ಐ ರಾಜೇಶ್ ಪಿ. ಅವರನ್ನೊಳಗೊಂಡ ವಿಶೇಷ ಅಪರಾಧ ಪತ್ತೆ ದಳವನ್ನು ಪ್ರಕರಣ ಸಂಬಂಧ ರಚಿಸಲಾಗಿತ್ತು.






































































