ಕಾರ್ಕಳ : ಶಿರ್ಲಾಲು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಾಂಶುಪಾಲ ಬೇಬಿ ಕೆ. ಈಶ್ವರಮಂಗಲ ಮೇ. 31ರಂದು ನಿವೃತ್ತಿ ಹೊಂದಲಿದ್ದಾರೆ. ಮೂಲತಃ ಪುತ್ತೂರಿನ ಈಶ್ವರಮಂಗಲದ ಬೇಬಿ ಅವರು 1993ರ ಜುಲೈಯಲ್ಲಿ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕನ್ನಡ ಉಪನ್ಯಾಸಕರಾಗಿ ಸೇರ್ಪಡೆಗೊಂಡು 24 ವರ್ಷಗಳ ಕಾಲ ಅಲ್ಲಿ ಕರ್ತವ್ಯ ಸಲ್ಲಿಸಿದ್ದರು. 2018ರಲ್ಲಿ ಶಿರ್ಲಾಲು ಸರಕಾರಿ ಪಿಯು ಕಾಲೇಜಿಗೆ ಪ್ರಾಂಶುಪಾಲರಾಗಿ ಪದೋನ್ನತಿಗೊಂಡು ಇದೀಗ ನಿವೃತ್ತಿ ಹೊಂದುತ್ತಿದ್ದಾರೆ.
ಶಿಕ್ಷಣ
ಈಶ್ವರಮಂಗಲ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಪೌಢಶಿಕ್ಷಣ ಪೂರೈಸಿರುವ ಅವರು ಬಳಿಕ ಪಿಯು ಹಾಗೂ ಪದವಿ ಶಿಕ್ಷಣವನ್ನು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗೋಲ್ಡ್ ಮೆಡಲಿಸ್ಟ್‌ನೊಂದಿಗೆ ಪೂರೈಸಿರುತ್ತಾರೆ.
ಸಾಹಿತ್ಯ ಸಂಘ
ಪ್ರೊ. ಎಂ. ರಾಮಚಂದ್ರ ಅವರು ಸ್ಥಾಪಿಸಿರುವ ಕಾರ್ಕಳ ಸಾಹಿತ್ಯ ಸಂಘದಲ್ಲಿ ಸಕ್ರಿಯರಾಗಿದ್ದ ಬೇಬಿ ಈಶ್ವರಮಂಗಲ ಅವರು ಕಳೆದ 25 ವರ್ಷಗಳಿಂದ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಶೈಕ್ಷಣಿಕ ಜೊತೆಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಬೇಬಿ ಅವರು ಕಾರ್ಕಳ ಯಕ್ಷ ಕಲಾರಂಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಚಿನ್ನದ ಪದಕದ ಪರಿಕಲ್ಪನೆ
ಶಿರ್ಲಾಲು ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ಸಲ್ಲಿಸಿರುವ ಬೇಬಿ ಈಶ್ವರಮಂಗಲ ಅವರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿದ ಬಳಿಕ ಕಾಲೇಜಿನ ಫಲಿತಾಂಶದಲ್ಲಿ ಸತತವಾಗಿ ಶೇ. 100 ಫಲಿತಾಂಶ ದಾಖಲಾಗಿರುವುದು ವಿಶೇಷ. ಸಂಸ್ಥೆಯಲ್ಲಿ 2018ರಿಂದ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಸಾಧಕ ವಿದ್ಯಾರ್ಥಿಗಳಿಗೆ ನಿರಂತರವಾಗಿ ಚಿನ್ನದ ಪದಕ ನೀಡುವ ಪರಂಪರೆ ಇವರ ಅವಧಿಯಲ್ಲೇ ಪ್ರಾರಂಭವಾಗಿರುವುದು ಗಮನಾರ್ಹ. ಚುನಾವಣೆ ಹಾಗೂ ಜನಗಣತಿ ಸಂದರ್ಭದಲ್ಲಿ ಮಾಸ್ಟರ್ ಟ್ರೈನರ್ ಆಗಿಯೂ ಬೇಬಿ ಅವರು ಕಾರ್ಯನಿರ್ವಹಿಸಿದ್ದರು.
ಕುಟುಂಬ
ಕಾರ್ಕಳ ಗುರುಮಾಚಿದೇವ ಸೊಸೈಟಿಯ ಮ್ಯಾನೇಜರ್ ಆಗಿರುವ ಸವಿತಾ ಅವರು ಬೇಬಿ ಅವರ ಪತ್ನಿ. ಇವರ ಹಿರಿಯ ಪುತ್ರಿ ಕು. ವಿಜೇತಾ ಅವರು ಏರೋನಾಟಿಕಲ್ ಇಂಜಿನೀಯರಿಂಗ್ ಪದವಿ ಪೂರೈಸಿ ಪ್ರತಿಷ್ಠಿತ ಬೋಯಿಂಗ್ ಇಂಡಿಯಾದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಕಿರಿಯ ಪುತ್ರಿ ವೀಕ್ಷಿತಾ ಬಿ.ಎಸ್. ಅವರು ಎಸ್‌ಡಿಎಂ ಉದ್ಯಾವರದಲ್ಲಿ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಾರೆ.
ಜೂ. 3 : ಬೀಳ್ಕೊಡುಗೆ
ಜೂ. 3ರ ಬುಧವಾರ ಕಾಲೇಜು ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಊರವರ ಪರವಾಗಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಶಾಸಕ ವಿ. ಸುನಿಲ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿರಾಜ್ ಜೈನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮಾನಂದ ನಾಯಕ್, ಡಿಡಿಪಿಯು ಮಾರುತಿ, ಡಿಡಿಪಿಐ ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಹಿರಿಯ ವಿದ್ಯಾರ್ಥಿ ಸಂಘದ ಶೀತಲ್ ಜೈನ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.















































































