ಕಾರ್ಕಳ : ಶಾಂಭವಿ ನದಿಗೆ ಬಿದ್ದು ವ್ಯಕ್ತಿಯೋರ್ವರು ಸಾವನಪ್ಪಿದ ದುರ್ಘಟನೆ ಮೇ 25ರಂದು ನಡೆದಿದೆ. ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇಷಾನ್ ಪಾಶಾ (40) ಮೃತಪಟ್ಟವರು.
ಮೂಲತ: ಮೈಸೂರು ಜಿಲ್ಲೆ ಪಿರಿಯಾಪಟ್ಟಣದವರಾದ ಇಷಾನ್ ಪಾಶಾ ತನ್ನ ಮೊದಲನೇ ಪತ್ನಿ ಮೃತಪಟ್ಟ ನಂತರ ಏಳು ತಿಂಗಳ ಹಿಂದೆ ಶಮೀನ್ ಎಂಬವರನ್ನು ಮದುವೆಯಾಗಿ ಜಾರಿಗೆಕಟ್ಟೆಯಲ್ಲಿ ವಾಸವಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಇವರು ಮದ್ಯಪಾನದ ಚಟ ಹೊಂದಿದ್ದು, ಹೆಂಡತಿಯೊಂದಿಗೆ ಆಗಾಗ ಜಗಳವಾಡುತ್ತಿದ್ದರು. ಮೇ 25ರಂದು ಮಂಗಳೂರಿನ ಜೋಕಟ್ಟೆಯ ತಂಗಿಯ ಮನೆಯಿಂದ ಬಂದು ಹೆಂಡತಿಯ ಹತ್ತಿರ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಗುರುವಾರ ಸಂಜೆ 5ಗಂಟೆ ಸುಮಾರಿಗೆ ಅವರ ಶವ ಕೊಳೆತ ಸ್ಥಿತಿಯಲ್ಲಿ ಶೆಟ್ಟಿಬೆಟ್ಟು ಎಂಬಲ್ಲಿ ಶಾಂಭವಿ ನದಿಯಲ್ಲಿ ಪತ್ತೆಯಾಗಿತ್ತು. ಮೃತರು ಶಾಂಭವಿ ನದಿಗೆ ಕಾಲುಜಾರಿ ಬಿದ್ದು ಅಥವಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












