ಕಾರ್ಕಳ : ಕರ್ನಾಟಕ ರಾಜ್ಯ ಪೊಲೀಸ್ ಆ್ಯಂಟಿ ನಕ್ಸಲ್ ಫೋರ್ಸ್ (ANF)ನ ಶ್ವಾನ ದಳದಲ್ಲಿ ಕಳೆದ ಹಲವು ವರ್ಷಗಳಿಂದ ಅತ್ಯಂತ ನಿಷ್ಠೆ, ಶಿಸ್ತು ಹಾಗೂ ಕಾರ್ಯಕ್ಷಮತೆಯಿಂದ ಸೇವೆ ಸಲ್ಲಿಸಿದ್ದ ಬೆಲ್ಜಿಯನ್ ಮ್ಯಾಲಿನೋಯಿಸ್ ತಳಿಯ ಹೆಣ್ಣು ಶ್ವಾನ ‘ಆಲ್ಚಿʼ ಜು.20ರಂದು ರಂದು ನಿವೃತ್ತಿ ಹೊಂದಿತು.
ಎಎನ್‌ಎಫ್ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಪೊಲೀಸ್ ನಿರೀಕ್ಷಕ ಸಂತೋಷ್, ಎಎನ್‌ಎಫ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನದ ಹ್ಯಾಂಡ್ಲರ್‌ಗಳು ಉಪಸ್ಥಿತರಿದ್ದು ‘ಆಲ್ಚೆ’ಯ ಅತ್ಯುತ್ತಮ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.
ಆಲ್ಚಿ 2018ರ ಆ. 11ರಂದು ದಿನಾಂಕ 2018 ನ. 10ರಂದು ಕರ್ನಾಟಕ ಆ್ಯಂಟಿ ನಕ್ಸಲ್ ಫೋರ್ಸ್‌ಗೆ ಸೇರ್ಪಡೆಗೊಂಡಿತ್ತು. ಬೆಂಗಳೂರಿನ CRPF Dog Breeding and Training Centre Taralu ನಲ್ಲಿ ವಿಶೇಷ ತರಬೇತಿ ಪಡೆದು Explosive Detection ಹಾಗೂ Assault Operations ಕ್ಷೇತ್ರಗಳಲ್ಲಿ ಪರಿಣತಿಯನ್ನು ಗಳಿಸಿತ್ತು. ತನ್ನ ಸೇವಾ ಅವಧಿಯಲ್ಲಿ ‘ಆಲ್ಚಿ’ ಕರ್ನಾಟಕದ ವಿವಿಧ ನಕ್ಸಲ್ ಪೀಡಿತ ಅರಣ್ಯ ಪ್ರದೇಶಗಳಲ್ಲಿ, ವಿಶೇಷವಾಗಿ ದತ್ತ ಅರಣ್ಯ ಪ್ರದೇಶ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಸಲಾದ ಕಾಂಬಿಂಗ್ ಕಾರ್ಯಾಚರಣೆಗಳು, ಶೋಧ ಕಾರ್ಯಾಚರಣೆಗಳು ಹಾಗೂ ವಿವಿಧ ಭದ್ರತಾ ಕಾರ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪಾಲ್ಗೊಂಡಿತ್ತು. ಸ್ಫೋಟಕ ವಸ್ತುಗಳ ಪತ್ತೆ, ಅಪಾಯಕಾರಿ ಪ್ರದೇಶಗಳ ಪರಿಶೀಲನೆ ಹಾಗೂ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗೆ ಅಮೂಲ್ಯ ಸಹಕಾರ ನೀಡುವ ಮೂಲಕ ಹಲವು ಕಾರ್ಯಾಚರಣೆಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು. ಆಲ್ಚಿಯನ್ನು ಹ್ಯಾಂಡ್ಲರ್‌ಗಳಾದ ಪ್ರದೀಪ್ ಬಿ.ಡಿ. ಹಾಗೂ ಧನಂಜಯ್ ಅವರು ಅತ್ಯಂತ ಕಾಳಜಿ, ಸಮರ್ಪಣೆ ಮತ್ತು ವೃತ್ತಿಪರತೆಯಿಂದ ನಿರ್ವಹಿಸಿದ್ದು, ಶ್ವಾನ ಹಾಗೂ ಹ್ಯಾಂಡ್ಲರ್‌ಗಳ ನಡುವಿನ ಹೊಂದಾಣಿಕೆ ಅನೇಕ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಯಶಸ್ಸಿಗೆ ಕಾರಣವಾಯಿತು.
ಶ್ವಾನಗಳು ಪೊಲೀಸ್ ಇಲಾಖೆಯ ಮೌನ ಯೋಧರಾಗಿದ್ದು, ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತವೆ. ಆಲ್ಚಿ ಸಹ ತನ್ನ ಸೇವಾ ಅವಧಿಯಲ್ಲಿ ನಿಸ್ವಾರ್ಥ ನಿಷ್ಠೆ, ಧೈರ್ಯ ಮತ್ತು ಕರ್ತವ್ಯಪ್ರಜ್ಞೆಯನ್ನು ಪ್ರದರ್ಶಿಸಿ ಎಎನ್‌ಎಫ್‌ನ ಹೆಮ್ಮೆಯ ಶ್ವಾನ ಯೋಧೆಯಾಗಿ ಗುರುತಿಸಿಕೊಂಡಿದೆ.
ನಿವೃತ್ತಿ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಲ್ಚಿಯ ಅಮೋಘ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿ, ಮುಂದಿನ ನಿವೃತ್ತಿ ಜೀವನವು ಆರೋಗ್ಯಕರ, ಸಂತೋಷಕರ ಹಾಗೂ ನೆಮ್ಮದಿಯಿಂದ ಕೂಡಿರಲೆಂದು ಶುಭ ಹಾರೈಸಿದರು.




























