ಕುಂದಾಪುರ : ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮುಂಜಾನೆ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರಿನ ರಸ್ತೆಯಲ್ಲಿ ನಡೆದಿದೆ. ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದವರು.
ಒಂದಷ್ಟು ವ್ಯವಹಾರಗಳನ್ನು ಮಾಡಿಕೊಂಡಿದ್ದ ಐವನ್ ತಮ್ಮ ಮೊದಲ ಪತ್ನಿಯಾದ ಸೆಲ್ಮಾ ಮಸ್ಕರೇನಸ್ ಅವರನ್ನು ತೊರೆದು ಬಾರ್ಕೂರು ಮೂಲದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು. ಶುಕ್ರವಾರ ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಬಂದಿದ್ದಾಗ ಕುಂದಾಪುರ ಚರ್ಚ್ ಎದುರಿಗೆ ಈ ಘಟನೆ ನಡೆದಿದೆ. ಪಿಸ್ತೂಲ್ ಮೂಲಕ ಆರೋಪಿ ಐವನ್ ಅವರಿಗೆ ಗುಂಡು ಹೊಡೆದು ಪರಾರಿಯಾಗಿದ್ದು, ತೀವ್ರ ರಕ್ತಸ್ರಾವಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗಿದ್ದ ಮಹಿಳೆ ಆರೋಪಿಯ ಗುರುತು ಹಚ್ಚಿದ್ದು, ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹಣಕಾಸು ಅಥವಾ ಬೇರೆ ವ್ಯವಹಾರಕ್ಕೆ ಸಂಬಂಧಪಟ್ಟ ವಿಚಾರಕ್ಕೆ ಕೊಲೆ ನಡೆದಿರಬಹುದೆಂದು ಪ್ರಾಥಮಿಕ ತನಿಖೆ ವೇಳೆ ಅಂದಾಜಿಸಲಾಗಿದೆ.
ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ, ಪಿಎಸ್ಐಗಳಾದ ನಂಜಾ ನಾಯ್ಕ್, ಪುಷ್ಪಾ, ಅನೂಪ್ ನಾಯಕ್ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

























