ತೋಟಕ್ಕೆ ಬಿದ್ದ ಬೆಂಕಿ ನಂದಿಸಲು ಹೋಗಿ ವೃದ್ಧಗೆ ಗಂಭೀರ ಗಾಯ; ಅಗ್ನಿಶಾಮಕ ದಳದವರಿಂದ ರಕ್ಷಣೆ

ನಿಟ್ಟೆ : ತೋಟಕ್ಕೆ ಆಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ನಂದಿಸಲು ಹೋದ ವೃದ್ಧರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸಮೀಪದ ಬಜೆಕ್ಕಳ ಶಿವಪೂಜೆ ಮನೆ ಎಂಬಲ್ಲಿ ಗುರುವಾರ ನಡೆದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

​ಬಜೆಕ್ಕಳ ಶಿವಪೂಜೆ ಮನೆಯ ನಿವಾಸಿ ಜಯಕರ ಶೆಟ್ಟಿ (80) ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ಮಕ್ಕಳು ವಿದೇಶದಲ್ಲಿದ್ದು, ಜಯಕರ ಶೆಟ್ಟಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದಾರೆ. ಇವರ ಮನೆಯ ಪಕ್ಕದಲ್ಲೇ ಗೇರು ಮಾವಿನ ತೋಟವಿದ್ದು, ಗುರುವಾರ ಬೆಳಿಗ್ಗೆ 10:30ರ ಸುಮಾರಿಗೆ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
​ತೋಟಕ್ಕೆ ಬೆಂಕಿ ಬಿದ್ದಿರುವುದನ್ನು ಕಂಡು ಆತಂಕಕ್ಕೊಳಗಾದ ಜಯಕರ ಶೆಟ್ಟಿ ಅವರು, ವಯೋಸಹಜ ಅಶಕ್ತತೆಯ ನಡುವೆಯೂ ಊರುಗೋಲು ಹಿಡಿದುಕೊಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಈ ವೇಳೆ ಗಾಳಿಯ ವೇಗಕ್ಕೆ ಬೆಂಕಿ ಉಲ್ಬಣಿಸಿ ಅವರ ಮೈಮೇಲೆ ಆವರಿಸಿದೆ. ಪರಿಣಾಮವಾಗಿ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ರಕ್ಷಕರಾದ ಅಗ್ನಿಶಾಮಕ ದಳ:
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ತುಕಡಿ, ಕೂಡಲೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ಹತೋಟಿಗೆ ತಂದಿದೆ. ಕೇವಲ ಬೆಂಕಿ ನಂದಿಸುವುದಕ್ಕೆ ಮಾತ್ರ ಸೀಮಿತವಾಗದ ಸಿಬ್ಬಂದಿ, ಗಾಯಾಳುವಿನ ಸ್ಥಿತಿ ಕಂಡು ತಕ್ಷಣವೇ ತಮ್ಮ ವಾಹನದಲ್ಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಿದ್ದಾರೆ. ಅಗ್ನಿಶಾಮಕ ದಳದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
​ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಶ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ, ಸಿಬ್ಬಂದಿ ಅಚ್ಚುತ ಕರ್ಕೇರ, ಹರಿಪ್ರಸಾದ್, ಬಸವರಾಜ್ ಹಾಗೂ ಲೋಕೇಶ್ ಪಾಲ್ಗೊಂಡಿದ್ದರು.







































































































error: Content is protected !!
Scroll to Top