ಕಡ್ಡಾಯ ಮುಟ್ಟಿನ ರಜೆಯಿಂದ ಮಹಿಳೆಯರ ಉದ್ಯೋಗಾವಕಾಶಕ್ಕೆ ಹೊಡೆತ : ಸುಪ್ರೀಂ ಕೋರ್ಟ್

ದೆಹಲಿ : ಎಲ್ಲ ಸಂಸ್ಥೆಗಳಲ್ಲಿ ಮಹಿಳೆಯರಿಗೆ ವೇತನಸಹಿತ ಮುಟ್ಟಿನ ರಜೆಯನ್ನು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಿಲೇವಾರಿ ಮಾಡಿತು. ಸಂಬಂಧಪಟ್ಟ ಎಲ್ಲರ ಜೊತೆ ಸಮಾಲೋಚಿಸಿ ಮುಟ್ಟಿನ ರಜೆ ನೀತಿಯನ್ನು ರೂಪಿಸಲು ಈ ರಿಟ್ ಅರ್ಜಿಯನ್ನು ಪರಿಗಣಿಸುವಂತೆ ಅದು ಕೇಂದ್ರ ಸರಕಾರಕ್ಕೆ ಸೂಚಿಸಿತು.

ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಶಾಸನದ ಮೂಲಕ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಮಹಿಳೆಯರ ಉದ್ಯೋಗದ ಮೇಲೆ ಅನುದ್ದೇಶಿತ ಪರಿಣಾಮಗಳನ್ನು ಬೀರಬಹುದು ಎಂದು ಕಳವಳವನ್ನು ವ್ಯಕ್ತಪಡಿಸಿತು. ರಜೆ ಕಡ್ಡಾಯವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳುವುದನ್ನು ನಿರುತ್ತೇಜಿಸಬಹುದು. ತನ್ಮೂಲಕ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.

ಖಾಸಗಿ ಕಂಪೆನಿಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡಿದರೆ ಅದು ಅತ್ಯುತ್ತಮ ಕ್ರಮವಾಗಬಹುದು. ಆದರೆ ಅದನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸಿದರೆ, ಕಂಪೆನಿಗಳು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದು. ಕಂಪಲ್ಸರಿ ಎಂದ ಕೂಡಲೆ ಯಾರೂ ಮಹಿಳೆಯರಿಗೆ ಕೆಲಸ ಕೊಡುವುದಿಲ್ಲ, ಮಹಿಳೆಯರ ವೃತ್ತಿಜೀವನವೇ ಎಂಡ್‌ ಆಗಬಹುದು. ಮನೆಯಲ್ಲೇ ಕುಳಿತುಕೊಳ್ಳಿ ಎಂದು ಹೇಳುವ ಪರಿಸ್ಥತಿ ಬರಬಹುದು ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಂತಹ ಅರ್ಜಿಗಳು ಕೆಲವೊಮ್ಮೆ ಮಹಿಳೆಯರನ್ನು ದುರ್ಬಲರು ಎಂದು ಬಿಂಬಿಸುವ ಭಯವನ್ನೂ ಉಂಟುಮಾಡಬಹುದು. ಮಾಸಿಕ ಮುಟ್ಟಿನಿಂದ ಮಹಿಳೆಯರಲ್ಲಿ ಕೀಳರಿಮೆ ಅಥವಾ ತಮಗೇನೋ ಕೆಟ್ಟದಾಗುತ್ತಿದೆ ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಈ ವಿಚಾರವನ್ನ ನೋಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಟ್ಟಿನ ರಜೆ ಕಡ್ಡಾಯಗೊಳಿಸಬೇಕೆಂಬ ಅರ್ಜಿಯನ್ನ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದವರು ಶೈಲೇಂದ್ರ ಮಣಿ ತ್ರಿಪಾಠಿ. ತಮ್ಮ ಅರ್ಜಿಯಲ್ಲಿ ಕೆಲ ರಾಜ್ಯಗಳು ಮತ್ತು ಖಾಸಗಿ ಕಂಪನಿಗಳು ಈಗಾಗಲೇ ಮಾಸಿಕ ರಜೆ ನೀಡುವ ಕ್ರಮವನ್ನು ಜಾರಿಗೆ ತಂದಿರುವುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಮುಟ್ಟಿನ ರಜೆ ವಿಷಯದಲ್ಲಿ ಸರಿಯಾದ ನೀತಿ ರೂಪಿಸುವ ಸಾಧ್ಯತೆಯನ್ನು ಸಂಬಂಧಿತ ಅಧಿಕಾರಿಗಳು ಎಲ್ಲಾ ಹಿತಾಸಕ್ತಿದಾರರೊಂದಿಗೆ ಚರ್ಚಿಸಿ ಪರಿಗಣಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಕಡ್ಡಾಯ ಮಾಸಿಕ ರಜೆ ಮಹಿಳೆಯರ ವೃತ್ತಿಜೀವನದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಹಿಳೆಯರಿಗೆ ಮಾಸಿಕ ರಜೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಕೆಲವು ಮಂದಿ ಮಹಿಳೆಯರ ಆರೋಗ್ಯ ಮತ್ತು ವಿಶ್ರಾಂತಿಗಾಗಿ ಈ ಕ್ರಮ ಅಗತ್ಯವೆಂದು ವಾದಿಸಿದ್ದಾರೆ. ಮತ್ತೊಂದು ವಲಯದಲ್ಲಿ ಇದು ಲಿಂಗಾಧಾರಿತ ಕಲ್ಪನೆಗಳನ್ನು ಮತ್ತಷ್ಟು ಬಲಪಡಿಸಬಹುದು ಎಂಬ ಆತಂಕವೂ ಇದೆ.

ಇದು ಈ ವಿಷಯದಲ್ಲಿ ಸಲ್ಲಿಸಲಾದ ಮೂರನೇ ರಿಟ್ ಅರ್ಜಿಯಾಗಿದೆ. ಫೆ.2023ರಲ್ಲಿ ಮೊದಲ ಅರ್ಜಿಯನ್ನು ವಿಲೇವಾರಿ ಮಾಡಿದ್ದ ನ್ಯಾಯಾಲಯವು,ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಮುಂದೆ ಅಹವಾಲು ಸಲ್ಲಿಸಲು ಅವಕಾಶ ನೀಡಿತ್ತು. 2024ರಲ್ಲಿ ಮತ್ತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ ಅರ್ಜಿದಾರರು,ತನ್ನ ಅಹವಾಲಿಗೆ ಸಚಿವಾಲಯವು ಪ್ರತಿಕ್ರಿಯಿಸಿಲ್ಲ ಎಂದು ತಿಳಿಸಿದ್ದರು. ಜು.2024ರಲ್ಲಿ ಸದ್ರಿ ಅರ್ಜಿಯನ್ನು ವಿಲೇವಾರಿ ಮಾಡಿದ್ದ ನ್ಯಾಯಾಲಯವು, ನೀತಿ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು.









































































































error: Content is protected !!
Scroll to Top