ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 446ರಂತೆ ನ್ಯಾಯೋದ್ದೇಶದಿಂದ ಯಾವುದೇ ಒಂದು ಕ್ರಿಮಿನಲ್ (ಅಪರಾಧಿಕ) ಪ್ರಕರಣವನ್ನು ಅಥವಾ ಕ್ರಿಮಿನಲ್ ಅಫೀಲನ್ನು ದೇಶದ ಒಳಗಿನ ಹೈಕೋರ್ಟ್ ಅಥವಾ ಅದಕ್ಕೆ ಅಧೀನವಾಗಿರುವ ಯಾವುದೇ ಒಂದು ಕ್ರಿಮಿನಲ್ ನ್ಯಾಯಾಲಯದಿಂದ ಬೇರೆ ಯಾವುದೇ ಹೈಕೋರ್ಟ್ ಅಥವಾ ಅದಕ್ಕೆ ಅಧೀನವಾಗಿರುವ ಯಾವುದೇ ಒಂದು ಕ್ರಿಮಿನಲ್ ನ್ಯಾಯಾಲಯಕ್ಕೆ ವರ್ಗಾಯಿಸುವ ಅಧಿಕಾರವನ್ನು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಂ ಕೋರ್ಟ್) ಹೊಂದಿರುತ್ತದೆ.
ದೇಶದ ಮಹಾ ನ್ಯಾಯವಾದಿ (ಎಡ್ವೋಕೇಟ್ ಜನರಲ್ ಆಫ್ ಇಂಡಿಯಾ) ಅಥವಾ ಪ್ರಕರಣದ ಮೇಲೆ ಹಿತಾಸಕ್ತಿ ಹೊಂದಿರುವ ಯಾವುದೇ ವ್ಯಕ್ತಿಯ ಮನವಿಯ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಂ ಕೋರ್ಟ್) ಸೂಕ್ತ ಆದೇಶ ಮೂಲಕ ಈ ರೀತಿಯ ಕ್ರಮವನ್ನು ಕೈಗೊಳ್ಳಬಹುದಾಗಿದೆ. ಅದೇ ರೀತಿಯಾಗಿ ಮೇಲ್ಕಾಣಿಸಿದ ಕಾನೂನಿನ ಕಲಂ 447ರ ಪ್ರಕಾರ ನಮ್ಮ ದೇಶದೊಳಗಿನ ಯಾವುದೇ ಒಂದು ರಾಜ್ಯಕ್ಕೆ ಸಂಬಂಧಪಟ್ಟ ಹೈಕೋರ್ಟ್ ತನ್ನ ರಾಜ್ಯದ ವ್ಯಾಪ್ತಿಯೊಳಗಿನ ಯಾವುದೇ ಮೊಕದ್ದಮೆಯನ್ನು ಮತ್ತು ಆಫೀಲನ್ನು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸುವ ಕಾನೂನುಬದ್ಧ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಈ ರೀತಿಯಾಗಿ ವರ್ಗಾವಣೆ ಆದೇಶ ಮಾಡುವುದಕ್ಕಾಗಿ ನ್ಯಾಯಾಲಯವು ಸೂಕ್ತವಾದ ಕಾರಣ ನೀಡಿ ಆದೇಶವನ್ನು ಮಾಡಬೇಕಾಗಿರುತ್ತದೆ.
ಮೇಲ್ಕಾಣಿಸಿದ ಕಾನೂನಿನ ಕಲಂ 448 ರ ಪ್ರಕಾರ ನ್ಯಾಯೋದ್ದೇಶಗಳಿಗಾಗಿ ಯಾವುದೇ ಒಂದು ಜಿಲ್ಲೆಯ ಸತ್ರ ನ್ಯಾಯಾಲಯದ (ಜಿಲ್ಲಾ ನ್ಯಾಯಾಲಯ) ಜಿಲ್ಲಾ ನ್ಯಾಯಾಧೀಶರು ತನ್ನ ಜಿಲ್ಲಾ ವ್ಯಾಪ್ತಿಯೊಳಗಿನ ಯಾವುದೇ ಒಂದು ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯೋದ್ದೇಶದಿಂದ ಯುಕ್ತವೆಂದು ಕಂಡುಬಂದ ಸಂಧರ್ಭದಲ್ಲಿ ತನ್ನ ವ್ಯಾಪ್ತಿಯೊಳಗಿನ ಒಂದು ಅಪರಾಧಿಕ (ಕ್ರಿಮಿನಲ್) ನ್ಯಾಯಾಲಯದಿಂದ ಮತ್ತೊಂದು ಅಪರಾಧಿಕ (ಕ್ರಿಮಿನಲ್) ನ್ಯಾಯಾಲಯಕ್ಕೆ ವರ್ಗಾಯಿಸುವ ಬಗ್ಗೆ ಸೂಕ್ತ ಆದೇಶವನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಈ ರೀತಿಯ ಆದೇಶವನ್ನು ಜಿಲ್ಲಾ ನ್ಯಾಯಾಲಯವು ತನ್ನ ಪರಿಮಿತಿಯೊಳಗಿನ ಕೆಳ ನ್ಯಾಯಾಲಯದ ವರದಿಯ ಮೇಲೆ ಅಥವಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿತಾಸಕ್ತಿಯುಳ್ಳ ಪಕ್ಷಕಾರರ ಅವೇದನೆಯ ಮೇರೆಗೆ ಅಥವಾ ನ್ಯಾಯಾಲಯವು ತಾನಾಗಿಯೇ (ಸುವೋ ಮೋಟೊ) ಮಾಡಬಹುದಾಗಿದೆ.






















