ದೆಹಲಿ : ಭಾರತ ವಿರುದ್ಧ ಫೆ. 15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ಗೊಂದಲ ಇದೀಗ ಸಂಪೂರ್ಣವಾಗಿ ಬಗೆಹರಿದಿದ್ದು, ನಿಗದಿಯಂತೆ ಪಂದ್ಯ ನಡೆಯಲಿದೆ. ಈ ಸಂಬಂಧ ಪಾಕಿಸ್ತಾನ ಸರ್ಕಾರ ಸೋಮವಾರ ರಾಷ್ಟ್ರೀಯ ತಂಡಕ್ಕೆ ಭಾರತದ ವಿರುದ್ಧ ಟಿ20 ಪಂದ್ಯ ಆಡಲು ಅನುಮತಿ ನೀಡಿದ್ದು, ಪಂದ್ಯ ವೇಳಾಪಟ್ಟಿಯನ್ನು ಗೌರವಿಸುವುದಾಗಿ ಸ್ಪಷ್ಟಪಡಿಸಿದೆ.
ಪಂದ್ಯ ಬಹಿಷ್ಕಾರದಿಂದ ಪಾಕಿಸ್ತಾನಕ್ಕೆ ಎದುರಾಗಬಹುದಾದ ಸಂಭಾವ್ಯ ಹಣಕಾಸು ಪರಿಣಾಮಗಳ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಸರ್ಕಾರದ ಸೂಚನೆಯಂತೆ ಪಾಕಿಸ್ತಾನ ತನ್ನ ನಿಲುವು ಬದಲಿಸಿದೆ. ಫೋರ್ಸ್ ಮಜೂರ್ ನಿಯಮಾವಳಿಯ ಆಧಾರದಲ್ಲಿ ಕೊನೆಕ್ಷಣದಲ್ಲಿ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ ನಿರ್ಧರಿಸಿತ್ತು. ಅನಿಶ್ಚಿತ ಸಂದರ್ಭಗಳಲ್ಲಿ ಪಾಲುದಾರ ದೇಶಗಳು ತಮ್ಮ ಗುತ್ತಿಗೆ ಹೊಣೆಗಾರಿಕೆಗಳನ್ನು ಈಡೇರಿಸದಿರಲು ಈ ನಿಯಮಾವಳಿ ಅವಕಾಶ ನೀಡುತ್ತದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಿಸಿಬಿ, ಬಿಸಿಬಿ ಹಾಗೂ ಐಸಿಸಿ ನಡುವೆ ನಡೆದ ಸುಧೀರ್ಘ ಚರ್ಚೆಗಳ ವಿವರವನ್ನು ಅಧಿಕೃತವಾಗಿ ತಿಳಿಸಿದ್ದರು ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಪಿಸಿಬಿಗೆ ಸಲ್ಲಿಸಿದ್ದ ಮನವಿಯನ್ನು ಪಾಕ್ ಸರ್ಕಾರ ಪರಿಗಣಿಸಿದ್ದು, ಜೊತೆಗೆ ಶ್ರೀಲಂಕಾ, ಯುಎಇ ಹಾಗೂ ಇತರ ಸದಸ್ಯ ರಾಷ್ಟ್ರಗಳ ಬೆಂಬಲವನ್ನೂ ಪರಾಮರ್ಶಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.




















