ಕಾರ್ಕಳ : ಮಿಯ್ಯಾರು ಕಂಬಳ ಕ್ರಾಸ್ ಸಮೀಪ ನಡೆದ ತೂಫಾನ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಕಲಬುರ್ಗಿಯ ಒಂದೇ ಕುಟುಂಬದ ಮಲ್ಲಮ್ಮ, ಬಸವರಾಜ್ ಕಿಶೋರ್, ಲಕ್ಷ್ಮೀ, ಕುಶಾಲ್, ಸಂಗೀತಾ, ರೋಹಿತ್, ಚೇತು, ಕವಿತಾ, ಜಯ, ರಾಹುಲ್ ಹಾಗೂ ಮನ್ನಪ್ಪ (ಡ್ರೈವರ್) ಸೇರಿದಂತೆ 13 ಮಂದಿಯನ್ನೊಳಗೊಂಡ ಕುಟುಂಬ ತೂಫಾನ್ ವಾಹನದಲ್ಲಿ ದೇಗುಲ ದರ್ಶನಕ್ಕೆ ಬಂದಿದ್ದು, ಮಧ್ಯಾಹ್ನ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಊಟ ಮುಗಿಸಿ ಕಾರ್ಕಳ ಬಜಗೋಳಿ ರಾಷ್ಟ್ರೀಯ ಹೆದ್ದಾರಿಯಾಗಿ ಧರ್ಮಸ್ಥಳದೆಡೆಗೆ ಸಾಗುವಾಗ ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ಪ್ರೈಸ್ ದಿ ಲಾರ್ಡ್ (ವರುಣ್) ಖಾಸಗಿ ಬಸ್ ಡಿಕ್ಕಿಯಾಗಿದೆ. ಪರಿಣಾಮವಾಗಿ ತೂಫಾನ್ ಚಾಲಕ ಮನ್ನಪ್ಪ ಸ್ಥಳದಲ್ಲೇ ಸಾವನಪ್ಪಿದ್ದಾರೆ. ರೋಹಿತ್ ಮತ್ತವರ ಸಹೋದರ ಚೇತು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಇನ್ನು ಕಾರ್ಕಳ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕರೆದೊಯ್ದಿದ್ದ ಮಲ್ಲಮ್ಮ ಮೃತಪಟ್ಟಿದ್ದಾರೆ.
ಕುಶಾಲ್ ಎಂಬ ಎರಡು ವರ್ಷದ ಮಗುವನ್ನು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಗುವಿನ ತಂದೆ ಕಿಶೋರ್ ಮತ್ತು ತಾಯಿ ಲಕ್ಷ್ಮೀ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಮತ್ತು ಆಂಬ್ಯುಲೆನ್ಸ್ ತ್ವರಿತ ಸ್ಪಂದನೆ
ದುರ್ಘಟನೆ ನಡೆಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ಸಾರ್ವಜನಿಕರು ವಾಹನದಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸ್ಪಂದಿಸುವಲ್ಲಿ ತ್ವರಿತವಾಗಿ ಸ್ಪಂದಿಸಿದ್ದಾರೆ. ಇನ್ನು ಮಲ್ಪೆ, ಮುಲ್ಕಿ, ಪೆರ್ಡೂರು, ಮಂಚಕಲ್ಲು, ಅಜೆಕಾರು, ಕಾರ್ಕಳದ ಸರಿಕಾರಿ ಆಂಬುಲೆನ್ಸ್ (108) ಹಾಗೂ ಸ್ಥಳೀಯ ಖಾಸಗಿ ಆಂಬುಲೆನ್ಸ್ ಗಳು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸುವಲ್ಲಿ ವೇಗದ ಕಾರ್ಯ ನಿರ್ವಹಸಿದ್ದಾರೆ. ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ನಗರ ಪೊಲೀಸರು ತಕ್ಷಣವೇ ಆಗಮಿಸಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






































































