ಭೂ ಸ್ವಾಧೀನ ಕಾಯ್ದೆಯ ನಿಯಮಗಳು

ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸರಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳಿಗಾಗಿ ಅಂದರೆ ಹೆದ್ದಾರಿ ನಿರ್ಮಾಣ, ಕಾಲುವೆ ನಿರ್ಮಾಣ, ಕೈಗಾರಿಕಾ ವಲಯ ನಿರ್ಮಾಣ, ವಿಮಾನ ನಿಲ್ದಾಣ, ರೈಲ್ವೆ, ಮತ್ತಿತರ ವಿಶೇಷ ಆರ್ಥಿಕ ವಲಯ ನಿರ್ಮಾಣ ಮೂಲ ಸೌಕರ್ಯಗಳಿಗಾಗಿ ಸಾರ್ವಜನಿಕರ ಭೂಮಿಯನ್ನು ಸರಕಾರವು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ‘ಭೂ ಸ್ವಾಧೀನ ಪ್ರಕ್ರಿಯೆ’ ಎನ್ನುತ್ತಾರೆ. ಈ ರೀತಿಯಾಗಿ ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರವಾಗಲಿ ಭೂ ಸ್ವಾಧೀನ ಕಾಯ್ದೆ (ಲ್ಯಾಂಡ್ ಅಕ್ವಿಷಿಸನ್ ಆಕ್ಟ್ ) ಕಾನೂನಿನ ವಿವಿಧ ನಿಯಮಾನುಸಾರದ ಚೌಕಟ್ಟಿನೊಳಗೆ ನಡೆಸಬೇಕಾಗುತ್ತದೆ. ಒಂದು ವೇಳೆ ಸರಕಾರವು ಮೇಲ್ಕಾಣಿಸಿದ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿಯ ಅಥವಾ ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಅಂತಹ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.

ಈ ಹಿಂದೆ ಭಾರತ ದೇಶದಲ್ಲಿ ಪ್ರಥಮ ಬಾರಿಗೆ 01-03-1894ರಲ್ಲಿ ಈ ಮೇಲ್ಕಾಣಿಸಿದ ಭೂ ಸ್ವಾಧೀನ ಕಾಯ್ದೆಯು ಜ್ಯಾರಿಗೆ ಬಂದಿತ್ತು. ಈ ಕಾಯ್ದೆಯ ಮೂಲ ಉದ್ದೇಶ ಭೂಮಿಯನ್ನು ಕಳೆದುಕೊಂಡ ಜನರ ಅದರಲ್ಲೂ ರೈತರ ಹಿತವನ್ನು ಕಾಪಾಡುವುದು ಆಗಿರುತ್ತದೆ. ಈ ಹಳೆಯ 120 ವರ್ಷಗಳ ಹಿಂದಿನ ಭೂ ಸ್ವಾಧೀನ ಕಾಯ್ದೆಯಲ್ಲಿನ ವಿವಿಧ ಲೋಪಗಳನ್ನು ಸರಿಪಡಿಸುವ ಸದುದ್ದೇಶದಿಂದ 31-12-2013ರಂದು ಮೇಲ್ಕಾಣಿಸಿದ ಕಾನೂನನ್ನು ತಿದ್ದುಪಡಿಗೊಳಿಸಿ ದಿ ರೈಟ್ ಟು ಫೇರ್ ಕಾಂಪೆನ್‌ಷೇಶನ್ ಆಂಡ್ ಟ್ರಾನ್ಸ್ಫರೆನ್ಸಿ ಇನ್ ಲ್ಯಾಂಡ್ ಅಕ್ವಿಷಿಸನ್, ರಿಹೆಬಿಲಿಟೇಶನ್ ಆಂಡ್ ರಿ ಸೆಟ್ಲ್ಮೆಂಟ್ ಆಕ್ಟ್ 2013 ಎಂಬ ಹೊಸ ಕಾನೂನನ್ನು ಕೇಂದ್ರ ಸರಕಾರವು 01-01-2014 ರಿಂದ ಜ್ಯಾರಿಗೆ ತಂದಿದ್ದು ಅದೀಗ ಪರಿಣಾಮಕಾರಿಯಾಗಿ ಜ್ಯಾರಿಯಲ್ಲಿರುತ್ತದೆ. ಈ ಹಿಂದೆ ಸರಕಾರದ ವಿವಿಧ ಯೋಜನೆಗಳಿಗೆ ಖಾಸಗಿ ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಮಧ್ಯವರ್ತಿಗಳು ಅಕ್ರಮ ಎಸಗಿ ದುರ್ಲಾಭ ಹೊಂದಿ ಭೂಮಿಯನ್ನು ಕಳೆದುಕೊಂಡ ವ್ಯಕ್ತಿಗಳು ಅದರಲ್ಲೂ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದರು. ಆದರೆ ಈಗಿನ ತಿದ್ದುಪಡಿ ಕಾನೂನಿನ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರಕಾರದ ಅಧಿಕಾರಿಗಳು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದಂತೆ ಕಟ್ಟುನಿಟ್ಟಾಗಿ ಪಾಲಿಸಿ ನಡೆಸಿದಲ್ಲಿ ಭೂಮಿ ಕಳೆದುಕೊಂಡ ವ್ಯಕ್ತಿಗಳು ಪಾರದರ್ಶಕವಾಗಿ ಮತ್ತು ನ್ಯಾಯೋಚಿತವಾಗಿ ವ್ಯವಹರಿಸಿ ಸೂಕ್ತ ಮತ್ತು ಸಮರ್ಪಕವಾದ ಪರಿಹಾರದ ಮೊತ್ತವನ್ನು ಸರಕಾರದಿಂದ ನಿಗದಿತ ಅವಧಿಯೊಳಗಾಗಿ ಪಡೆಯಬಹುದಾಗಿದೆ.

ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಯಾವುದೇ ಸರ್ಕಾರಿ ಯೋಜನೆಗಾಗಿ ಸರಕಾರವಾಗಲಿ ಅಥವಾ ಸರಕಾರದ ಅಂಗ ಸಂಸ್ಥೆಯಾಗಲಿ ಸಾರ್ವಜನಿಕರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಮುನ್ನ ಸರಕಾರದ ಯೋಜನೆಯಿಂದ ಸಮಾಜಕ್ಕೆ ಉಂಟಾಗಬಹುದಾದ ಆಗು ಹೋಗುಗಳ ಮತ್ತು ಪರಿಣಾಮಗಳ ಬಗ್ಗೆ ಸರಕಾರದಿಂದ ನೇಮಿಸಿದ ಪ್ರಾಧಿಕಾರದ ಮುಖಾಂತರ ಅಧ್ಯಯನ ನಡೆಸಿ ವರದಿಯನ್ನು ಪಡೆಯಬೇಕಾಗುತ್ತದೆ ಮತ್ತು ಭೂ ಸ್ವಾಧೀನದಿಂದ ಭಾದಿತರಾಗುವ ಜನರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಬೇಕಾಗುತ್ತದೆ. ಯಾವುದೇ ಸಾರ್ವಜನಿಕ ಯೋಜನೆಗೆ ಅಗತ್ಯಕ್ಕಿಂತ ಜಾಸ್ತಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ. ಆ ನಂತರ ಸರಕಾರವು ಮೇಲ್ಕಾಣಿಸಿದ ಕಾಯ್ದೆಯ ನಿಯಾಮಾನುಸಾರವಾಗಿ ಸಾರ್ವಜನಿಕ ಸಭೆಯನ್ನು ನಡೆಸಿ ಭೂ ಸ್ವಾಧೀನದಿಂದ ಭೂಮಿಯನ್ನು ಕಳೆದುಕೊಳ್ಳುವ ಅಂದರೆ ಭಾದಿತರಾಗುವ ಜನರಿಂದ ಅಹವಾಲನ್ನು ಸ್ವೀಕರಿಸಿ ಸಾರ್ವಜನಿಕ ಪ್ರಕಟಣೆ ಮುಖಾಂತರ ಸಾರ್ವಜನಿಕರಿಗೆ ತಿಳಿಸಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸರಕಾರವು ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿಯ ಸಾರ್ವಜನಿಕ ಪ್ರಕಟಣೆ ನಂತರ ಸರಕಾರವು ಪಡೆಯುವ ವರದಿಯನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಿ ಸ್ಥಳೀಯ ಪಂಚಾಯತ್, ಪುರಸಭೆ, ತಹಶೀಲ್ದಾರರು, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಮತ್ತು ಸರಕಾರದ ಸೂಚಿತ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕು. ಮಾತ್ರವಲ್ಲದೆ ಉದ್ದೇಶಿತ ಯೋಜನೆಯಿಂದ ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆ ವರದಿಯನ್ನು ಕೇಂದ್ರ ಸರಕಾರದ ಪರಿಸರ ಸಂರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಬೇಕು. ಈ ರೀತಿಯಾಗಿ ತಯಾರಿಸಿದ ಸಾಮಾಜಿಕ ಪರಿಣಾಮ ವರದಿಯನ್ನು ಸ್ವತಂತ್ರ ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸಬೇಕು. ಈ ತಜ್ಞರ ಸಮಿತಿಯಲ್ಲಿ ಇಬ್ಬರು ಸ್ವತಂತ್ರ ಅಧಿಕಾರೇತರ ಪರಿಸರ ವಿಜ್ಞಾನಿಗಳು, ಪಂಚಾಯತ್ ಅಥವಾ ಪುರಸಭೆಯ ಇಬ್ಬರು ಪ್ರತಿನಿಧಿಗಳು, ಪರಿಹಾರ ಕುರಿತು ಇಬ್ಬರು ತಜ್ಞರು, ಒಬ್ಬ ತಾಂತ್ರಿಕ ಪರಿಣಿತ ಹಾಗೂ ಸರಕಾರದಿಂದ ನೇಮಿಸಲ್ಪಟ್ಟ ಸಮಿತಿಯ ಮುಖ್ಯಸ್ಥರು ಇರುತ್ತಾರೆ. ತಜ್ಞರ ಸಮಿತಿ ರಚಿಸಿದ ಶಿಫಾರಸ್ಸು ವರದಿಯನ್ನು ಎರಡು ತಿಂಗಳ ಒಳಗೆ ಸಮಿತಿಯು ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ ಮತ್ತು ಸರಕಾರವು ತಜ್ಞರ ಸಮಿತಿಯ ಶಿಫಾರಸ್ಸು ವರದಿಯನ್ನು ಸ್ಥಳೀಯ ಭಾಷೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸ್ಥಳಿಯ ಆಡಳಿತ ಮತ್ತು ಸರಕಾರಿ ಕಛೇರಿಗಳಲ್ಲಿ ಪ್ರಕಟಿಸಬೇಕಾಗುತ್ತದೆ.















































































































































error: Content is protected !!
Scroll to Top