1500ಕ್ಕೂ ಅಧಿಕ ಪೊಲೀಸರ ನಿಯೋಜನೆ
ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲು ಉದ್ದೇಶಿಸಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪರ್ಯಾಯ ಮಹೋತ್ಸವಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ. ಅಲ್ಲದೇ ಗಣ್ಯ ವ್ಯಕ್ತಿಗಳು ಜಿಲ್ಲಾ ಭೇಟಿ ಹಾಗೂ ಜಿಲ್ಲೆಯ ಸೂಕ್ಷತೆಯನ್ನು ಕಂಡು ಮುಂಜಾಗ್ರತೆಗಾಗಿ ಮತ್ತು ಬಂದೊಬಸ್ತ್ ಕರ್ತವ್ಯಕ್ಕೆ ಒಬ್ಬರು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, ಎಂಟು ಡಿವೈಎಸ್ಪಿ, 21 ಪೊಲೀಸ್ ನಿರೀಕ್ಷಕರು, 61 ಪೊಲೀಸ್ ಉಪನಿರೀಕ್ಷಕರು, 110 ಸಹಾಯಕ ಪೊಲೀಸ್ ಉಪನಿರೀಕ್ಷಕರು, 812 ಪೊಲೀಸ್ ಸಿಬ್ಬಂದಿ ಹಾಗೂ 200 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.

ಅಲ್ಲದೇ 4 ಕೆಎಸ್‌ಆರ್‌ಪಿ, 14-ಡಿಎಆರ್, 5-ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶ್ರೀಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ 70 ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ. ಒಂದು ಕ್ಯೂಆರ್‌ಟಿ ತಂಡ, 6 ಆಂಬ್ಯುಲೆನ್ಸ್, 6 ಅಗ್ನಿಶಾಮಕ, 5 ಅಗ್ನಿ ಬುಲೆಟ್, 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 6 ಪೊಲೀಸ್ ಸಹಾಯವಾಣಿ, 120 ಬೈನಾಕುಲರ್, 3 ಡ್ರೋನ್ ಕ್ಯಾಮೆರಾ, 300 ಬ್ಯಾರಿಕೇಡ್‌ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹೇಗಿರಲಿದೆ ಪರ್ಯಾಯ ಉತ್ಸವ
ಶ್ರೀ ಶೀರೂರು ಮಠದ ಶ್ರೀ ಶ್ರೀವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಜ.10 ರಿಂದ ಆರಂಭವಾದ ಹಸಿರು ಹೊರೆಕಾಣಿಕೆ ಮಠಕ್ಕೆ ಹರಿದು ಬರುತ್ತಿದ್ದು, ಜ. 17 ರವರೆಗೂ ಹೊರೆಕಾಣಿಕೆ ಹರಿದು ಬರಲಿದೆ.
ವಿದ್ಯುತ್ ದೀಪಾಲಂಕಾರದ ಉದ್ಘಾಟನೆ:
ಉಡುಪಿನಗರಸಭೆ ವತಿಯಿಂದ ಶಾಸಕರಾದ ಸುವರ್ಣ ಇವರ ನೇತೃತ್ವದಲ್ಲಿ ಪರ್ಯಾಯ ಮಹೋತ್ಸವದ ವಿದ್ಯುತ್ದೀಪ ಅಲಂಕಾರಕ್ಕೆ ರೂಪಾಯಿ 50 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ದೀಪಾಲಂಕಾರವನ್ನು ಬಹುತೇಕ ಪೂರ್ಣಗೊಳಿಸಿದ್ದು ಜ.15 ರಂದು ಸಂಜೆ ಸುಮಾರು 7 ಗಂಟೆಗೆ ಕೋರ್ಟ್ ಸಮೀಪ ಕೆನರಾ ಬ್ಯಾಂಕ್ ಎದುರುಗಡೆ ನೆರವೇರಲಿದೆ.
ಶ್ರೀ ಪರಶುರಾಮ ಸ್ವಾಗತ ಗೋಪುರದ ಶಿಲಾನ್ಯಾಸ:
ಉಡುಪಿಯ ದಕ್ಷಿಣಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತಗೋಪುರ ನಿರ್ಮಿಸಿದ್ದು ಇದೀಗ ಉಡುಪಿ ನಗರವನ್ನು ಪ್ರವೇಶಿಸುವ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ನಲ್ಲಿ ಶ್ರೀ ಪರಶುರಾಮರ ಭವ್ಯ ಸ್ವಾಗತ ಗೋಪುರವನ್ನು ಶೀರೂರು ಮಠದ ದಿವಾನರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ನಿರ್ಮಿಸುವುದೆಂದು ನಿರ್ಧರಿಸಿದ್ದು ಇದರ ಶಿಲಾನ್ಯಾಸವನ್ನು ಸಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ಜ.16 ಪೂರ್ವಾಹ್ನ 9 ಗಂಟೆಗೆ ದೇವತಾ ಪೂಜೆಯೊಂದಿಗೆ ನೆರವೇರಿಸಲಿದ್ದಾರೆ.
ಅನ್ನಸಂತರ್ಪಣೆ
ಜ.17ರಂದು ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪ ಬೋರ್ಡ್ ಜೂನಿಯರ್ ಕಾಲೇಜು – ಮೂರೂ ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷದಷ್ಟು ಜನರು ಭಾಗವಹಿಸುವ ನಿರೀಕ್ಷೆ ಇದೆ. ಜ.17 ರಿಂದ 22 ರವರೆಗೆ ಪ್ರತಿದಿನ ವಿಶೇಷ ಅನ್ನಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಶೋಭಾಯಾತ್ರೆ
ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳು ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ. ಇದರಲ್ಲಿ ಶ್ರೀಮದ್ವವಾದಿರಾಜ ಗುರುವರ್ಯರು ಶ್ರೀಶೀರೂರು ಮಠದ ಯತಿವರಿಯರ ಪರಂಪರೆ, ಪೌರಾಣಿಕ ಚಿತ್ರಗಳು ಎದ್ದುಕಾಣಲಿದ್ದು, ರಾಷ್ಟ್ರಾದ್ಯಂತ ಬಂದಂತಹ ಸಾಂಸ್ಕೃತಿಕ ತಂಡದಿಂದ ಪ್ರದರ್ಶನವನ್ನು ನೀಡಲಿದ್ದು ಸ್ಥಳೀಯ ಕರ್ನಾಟಕ ರಾಜ್ಯದ ಕಲಾತಂಡಗಳು, ಭಜನಾ ತಂಡಗಳು, ತಾಲೀಮು ತಂಡಗಳು ಈ ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ.
ಜ. 18 ರವಿವಾರ ಬೆಳಿಗ್ಗೆ ಎರಡು ಗಂಟೆಯಿಂದ ಆರಂಭವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಸಂಚರಿಸಲಿದ್ದು ಎಂದಿನಂತೆ ಕಲ್ಪನಾ ಜಂಕ್ಷನ್ ಮೂಲಕ ರಥಬೀದಿಗೆ ಸಾಗಲಿದೆ. ಮುಂದೆ ಶ್ರೀಕೃಷ್ಣಮಠದಲ್ಲಿ ದೇವತಾ ಕಾರ್ಯಗಳು ನಡೆದು ಶ್ರೀಗಳವರು ಸರ್ವಜ್ಞಪೀಠವನ್ನು ಅಲಂಕಾರಿಸಲಿದ್ದಾರೆ.
ಪರ್ಯಾಯ ದರ್ಬಾರ್:
ನೂತನವಾಗಿ ನಿರ್ಮಾಣಗೊಂಡಿರುವ ರಾಜಾಂಗಣದ ವೇದಿಕೆಯನ್ನು ಹೂ ಸಿಂಗಾರಗಳಿಂದ ಎಲ್ಲಾ ಮಠದ ಮಠಾಧೀಶರೊಂದಿಗೆ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಮುಂಜಾನೆ 5:30ಕ್ಕೆ ಆರಂಭವಾಗಲಿರುವ ದರ್ಬಾರ್ ಸಭೆ ಸುಮಾರು 9 ಗಂಟೆಯವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀಶ್ರೀ ವೇದವರ್ಧನತೀರ್ಥರು ಇತರ ಸ್ವಾಮೀಜಿಯವರೊಂದಿಗೆ ನಾಡಿನ ಗಣ್ಯರು ಉದ್ಯಮಿಗಳನ್ನು ಶ್ರೀಕೃಷ್ಣಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ವೇದವಿದ್ವಾಂಸರಿಂದ ಪ್ರವಚನ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯದ ಸಚಿವರು, ಗಣ್ಯವ್ಯಕ್ತಿಗಳು ಈ ಸಂದರ್ಭದಲ್ಲಿ ಭಾಗವಹಿಸಲಿರುವರು. ಜ. 18 ರಿಂದ ಪ್ರತಿದಿನ ಸಂಜೆ ಹತ್ತುದಿನಗಳ ಕಾಲ ಸಭಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಈ ಸಭೆಯಲ್ಲಿ ಕೂಡ ಅನೇಕ ಗಣ್ಯರಿಗೆ ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಶ್ರೀಕೃಷ್ಣಮಠ ಮಠದ ರಾಜಾಂಗಣ ಮತ್ತು ರಥಬೀದಿ ಸುತ್ತಮುತ್ತ ಹೂ ಮತ್ತು ವಿದ್ಯುತ್ದೀಪದಿಂದ ಅಲಂಕರಿಸಲಾಗುವುದು.















































