ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್‌

ದೆಹಲಿ : ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ ದಾಖಲೆ ಬರೆಯಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. 1947ರ ಬಳಿಕ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ದೇಶದ ಪ್ರಧಾನಿ ಕಚೇರಿ ಬದಲಾಗುತ್ತಿದೆ. ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಸೇರಿದಂತೆ ನಂತರದ ಎಲ್ಲಾ ಪ್ರಧಾನಿಗಳು ಸೌತ್ ಬ್ಲಾಕ್ ಕಚೇರಿಯಲ್ಲೇ ಕಾರ್ಯನಿರ್ವಹಿಸಿದ್ದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʻಸೆಂಟ್ರಲ್‌ ವಿಸ್ಟಾʼ ಯೋಜನೆ ಭಾಗವಾಗಿ ನಿರ್ಮಿಸಲಾದ ʻಸೇವಾ ತೀರ್ಥʼ ಸಂಕೀರ್ಣಕ್ಕೆ ಪ್ರಧಾನಿ ಮೋದಿ ಅವರು ಜ.14ರ ಮಕರ ಸಂಕ್ರಾಂತಿಯಂದೇ ಸ್ಥಳಾಂತರಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಸಂಕೀರ್ಣವನ್ನ ಪ್ರಧಾನಿಗಳ ಕಚೇರಿ, ಕ್ಯಾಬಿನೆಟ್‌ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಕಚೇರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ಕಟ್ಟಡವನ್ನ ಮೀಸಲಿರಿಸಲಾಗಿದೆ.

ಪ್ರಧಾನಿಗಳ ಹೊಸ ಕಚೇರಿಗೆ ʻಸೇವೆʼ ಎಂಬ ವಸ್ತುವಿಷಯವನ್ನಾಧರಿಸಿ ʻಸೇವಾ ತೀರ್ಥ-1ʼ ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಸೇವೆಯ ಮಹತ್ವವನ್ನು ಬಿಂಬಿಸುವ ಆಧುನಿಕ ಕಾರ್ಯಕ್ಷೇತ್ರಗಳು ಹಾಗೂ ಭವ್ಯ ಸಮಾರಂಭ ಕೊಠಡಿಗಳನ್ನೂ ಒಳಗೊಂಡಿದೆ. ಇನ್ನೂ ಕ್ಯಾಬಿನೆಟ್ ಸಚಿವಾಲಯಕ್ಕೆ ನಿರ್ಮಿಲಾದ ಕಚೇರಿಗೆ ʻಸೇವಾ ತೀರ್ಥ -2ʼ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿಗೆ ʻಸೇವಾ ತೀರ್ಥ-3ʼ ಎಂದು ನಾಮಕರಣ ಮಾಡಲಾಗಿದೆ.

1,189 ಕೋಟಿ ರೂ. ವೆಚ್ಚ
ಸಂಪೂರ್ಣ ʻಸೇವಾ ತೀರ್ಥʼ ಸಂಕೀರ್ಣವನ್ನ 1,189 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಒಟ್ಟು ವಿಸ್ತೀರ್ಣ 2,26,203 ಚದರ ಅಡಿ ಇದೆ. ಇನ್ನೂ ಪ್ರಧಾನ ಮಂತ್ರಿಯವರ ಹೊಸ ಅಧಿಕೃತ ನಿವಾಸವನ್ನ ʻಕಾರ್ಯನಿರ್ವಾಹಕ ಎನ್‌ಕ್ಲೇವ್ ಭಾಗ 2ʼ ಎಂದು ಹೆಸರಿಸಲಾಗಿದೆ.

ಹಳೇ ಕಚೇರಿ ಏನಾಗುತ್ತೆ?
ಪ್ರಧಾನ ಮಂತ್ರಿಗಳು ಹೊಸ ಕಚೇರಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳಲ್ಲಿರುವ ಕಚೇರಿಗಳನ್ನು ವಸ್ತು ಸಂಗ್ರಹಾಲಯಗಳನ್ನಾಗಿ ಬದಲಾವಣೆ ಮಾಡಲಾಗುತ್ತದೆ, ʻಯುಗೆ ಯುಗೀನ್ ಭಾರತ್ ಸಂಗ್ರಹಾಲಯʼ ಹೆಸರಿನಲ್ಲಿ ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತದೆ. ಯೋಜಿತ ವಸ್ತು ಸಂಗ್ರಹಾಲಯದ ಅಭಿವೃದ್ಧಿಗಾಗಿ 2024ರ ಡಿಸೆಂಬರ್‌ 19 ರಂದು ಫ್ರಾನ್ಸ್‌ನ ಮ್ಯೂಸಿಯಂ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.









































































































error: Content is protected !!
Scroll to Top