ಕಾರ್ಕಳ : ಬ್ರದರ್ಸ್ ಸ್ಪೋರ್ಟ್ಸ್ & ಯೂತ್ ಕ್ಲಬ್ ಅಜೆಕಾರು ಇದರ 35ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜ. 10-11ರಂದು ಅಜೆಕಾರಿನ ವೈಟ್ ಫೀಲ್ಡ್ ಗ್ರೌಂಡ್‌ನಲ್ಲಿ ಬ್ರದರ್ಸ್ ಟ್ರೋಪಿ ಕ್ರಿಕೆಟ್ ಪಂದ್ಯಾಟ ನಡೆಯಿತು. ಜ. 10ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ವೇದಮೂರ್ತಿ ಅರುಣ್ ಭಟ್ ಎಣ್ಣೆಹೊಳೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರದರ್ಸ್ ಸ್ಪೋರ್ಟ್ಸ್ & ಯೂತ್ ಕ್ಲಬ್ ಅಧ್ಯಕ್ಷ ವಿಜಯ್ ಶೆಟ್ಟಿ ಮಾತನಾಡಿ, ದೈಹಿಕ – ಮಾನಸಿಕ ಸದೃಢತೆಯನ್ನು ಕಾಪಾಡುವಲ್ಲಿ ಕ್ರೀಡೆಯ ಪಾತ್ರ ಮಹತ್ತರ. ಬ್ರದರ್ಸ್ ಕ್ಲಬ್ 35 ವರ್ಷಗಳಿಂದ ಕ್ರೀಡೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ನಿರಂತರವಾಗಿ ನಡೆಯುತ್ತಿರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯದಾಯಕ ನೆಮ್ಮದಿಯ ಜೀವನವನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಬ್ರದರ್ಸ್ ಕ್ಲಬ್ ಕ್ರೀಡಾ ಚಟುವಟಿಕೆಗಳೊಂದಿಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ತಂಡದ ಸದಸ್ಯರೊಳಗೆ ಸ್ನೇಹಪರ ವಾತಾವರಣವನ್ನು ಸೃಷ್ಟಿಸಿರುವುದು ಶ್ಲಾಘನೀಯ ಎಂದರು.

ಕಾರ್ಕಳ ಜೇಸಿ ಇಂಟರ್‌ನ್ಯಾಷನಲ್ ಸ್ಕೂಲ್ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್ ಮಾತನಾಡಿ, ಬ್ರದರ್ಸ್ ತಂಡವು ಕೇವಲ ಕ್ರೀಡಾ ಚಟುವಟಿಕೆಗೆ ತನ್ನ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸದೆ ಸಾಮಾಜಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಸುಮಾರು 9 ಲಕ್ಷ ರೂ.ಯ ಕಿಟ್ ನೀಡಿರುವುದು ಗಮನಾರ್ಹ. ತಂಡದ ಕಾರ್ಯವೈಖರಿ ಸಮಾಜಕ್ಕೆ ಮಾದರಿದಾಯಕ ಎಂದು ಅಭಿಪ್ರಾಯಪಟ್ಟರು.
ಉದ್ಯಮಿಗಳಾದ ಪ್ರಶಾಂತ್ ಶೆಟ್ಟಿ, ಸಂತೋಷ್ ಕುಮಾರ್ ರೆಂಜಾಳ, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ, ತಂಡದ ಗೌರವಾಧ್ಯಕ್ಷ ಪುನವ ಸಾಹೇಬ್, ಅಧ್ಯಕ್ಷ ನಜೀರ್‌ಶಾ, ಗೌರವ ಸಲಹೆಗಾರ ಆಸಿಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಭಯ ಜಿಲ್ಲೆಗಳ 20ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.

























