ಕಲ್ಲು ಮರಳು ಸಾಗಾಟದ ಲಾರಿಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ : ಎಸ್ಪಿ ಹರಿರಾಂ ಶಂಕರ್

ನಿಯಮ ಪಾಲನೆಗಾಗಿ 10 ದಿನಗಳ ಕಾಲಾವಕಾಶ

ಉಡುಪಿ : ಅತಿ ವೇಗದ ಲಾರಿ ಚಾಲನೆಯಿಂದಾಗಿ ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್ (ವೇಗ ನಿಯಂತ್ರಕ) ಕಡ್ಡಾಯವಾಗಿ ಅಳವಡಿಸುವ ಕುರಿತು ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿಸಿ ಮರಳು, ಮಣ್ಣು, ಕಲ್ಲು ಸೇರಿದಂತೆ ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ವಾಹನಗಳಿಗೆ ಗರಿಷ್ಠ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ವಾಹನಗಳು ಅತಿಯಾದ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದೆ. ಆದುದರಿಂದ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

10 ದಿನದ ಕಾಲಾವಕಾಶ
ಈ ನಿಯಮ ಪಾಲನೆಗಾಗಿ ಎಲ್ಲಾ ಲಾರಿ ಚಾಲಕ ಮಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ವಿಚಾರವಾಗಿ ಚಾಲಕರಿಗೆ ಯಾವುದೇ ಮಾಹಿತಿ ಕೊರತೆಯಾಗದಂತೆ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಅದೇ ರೀತಿ ಬಸ್‌ಗಳಲ್ಲಿ ಬಾಗಿಲು ಅಳವಡಿಕೆಗೆ ಜ. 20 ಕೊನೆಯ ದಿನಾಂಕವಾಗಿದ್ದು, ಆ ದಿನಾಂಕದ ನಂತರ ಬಾಗಿಲು ಇಲ್ಲದ ಬಸ್‌ಗಳಿಗೆ ದಂಡ ವಿಧಿಸಲಾಗುವುದು ಅಥವಾ ಬಸ್‌ಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕ‌ರ್ ತಿಳಿಸಿದ್ದಾರೆ.















error: Content is protected !!
Scroll to Top