ರಂಗಾಯಣ ರಂಗಮಂದಿರಕ್ಕೆ ಹಳೆ ಕಿಟಕಿ ಬಾಗಿಲು ಬಳಕೆ – ಯೋಗೀಶ್‌ ಆಚಾರ್ಯ ಆರೋಪ

ಕಾರ್ಕಳ : 2023ರ ಬಿಜೆಪಿ ಆಡಳಿತ ಅವಧಿಯಲ್ಲಿ ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5 ಕೋಟಿ ರೂ. ಅನುದಾನವನ್ನು ಮಂಜೂರುಗೊಳಿಸಿ ಕಾರ್ಕಳದಲ್ಲಿ ರಂಗಾಯಣ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ನಡೆಸುತ್ತಿದ್ದು ರಂಗಾಯಣ ರಂಗಮಂದಿರದ ಕಟ್ಟಡಕ್ಕೆ ಹಳೆಯ ಕಟ್ಟಡಗಳ ಕಿಟಕಿ ಬಾಗಿಲು ಬಳಸಿ ವಂಚಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಯೋಗೀಶ್‌ ಇನ್ನಾ ಆರೋಪಿಸಿದ್ದಾರೆ.
ಅವರು ಡಿ. 18ರಂದು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಸರಕಾರದ ಅನುದಾನವನ್ನು ಬಳಸಿಕೊಂಡು ನಿರ್ಮಾಣವಾಗುತ್ತಿರುವ ಕಾರ್ಕಳ ರಂಗಾಯಣವು ಇಂದು ಭ್ರಷ್ಟಾಚಾರದ ಕೂಪವಾಗಿದೆ. ಹೊಸ ಕಟ್ಟಡದ ಕಿಟಕಿ ಮತ್ತು ದಾರಂದ ಬಾಗಿಲುಗಳಿಗೆ ಹಳೆಯ ಮರದ ವಸ್ತುಗಳನ್ನು ಬಳಸಲಾಗಿರುವುದು ಕಳಪೆ ಕಾಮಗಾರಿಗೆ ಜೀವಂತ ಸಾಕ್ಷಿಯಾಗಿದೆ. ಇದು ಕೇವಲ ಕಳಪೆ ಕಾಮಗಾರಿ ಮಾತ್ರವಲ್ಲದೇ ಕಾರ್ಕಳದಲ್ಲಿ ಭಾರಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದ್ದೇವೆ ಎಂದು ಬಿಂಬಿಸಿ ಅಭಿವೃದ್ಧಿಯ ಹೆಸರಿನಲ್ಲಿ ಸರಕಾರದ ಹಣವನ್ನು ಲೂಟಿ ಹೊಡೆಯುವ ಯೋಜಿತ ಸಂಚು ಎಂದರು.

ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಸುನಿಲ್ ಕುಮಾರ್ ಅವರು ತನ್ನ ಬೆಂಬಲಿಗರೊಂದಿಗೆ ಎರಡು ಮೂರು ಬಾರಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದು ಅವರಿಗೆ ಇಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವುದು ಕಂಡಿಲ್ಲ. ನಾವು ಸ್ಥಳಕ್ಕೆ ಭೇಟಿ ನೀಡಿದಾಗ ನಮಗೆ ಹಳೆಯ ಮರದ ಕಿಟಕಿ ಬಾಗಿಲುಗಳನ್ನು ಜೋಡಿಸಿರುವುದು ಕಂಡಿದ್ದು ಸುನಿಲ್ ಕುಮಾರ್ ಅವರಿಗೆ ಯಾಕೆ ಕಂಡಿಲ್ಲ ? ಎಂದು ಯೋಗೀಶ್ ಪ್ರಶ್ನಿಸಿದರು.

ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಪ್ರದೀಪ್‌ ಬೇಲಾಡಿ ಮಾತನಾಡಿ, ಕಾಂಗ್ರೆಸ್ ನಾಯಕರ ವಿರುದ್ಧ ಅಪಪ್ರಚಾರ ನಡೆಸಿರುವ ಕಾರ್ಕಳ ಬಿಜೆಪಿ ಅಧ್ಯಕ್ಷರಿಗೆ ತಮ್ಮದೇ ಪಕ್ಷದ ಮುಖಂಡರು ನಿಟ್ಟೆ ಶಿಶುಮಂದಿರ ಬಾಳೆಹಿತ್ಲು ರಸ್ತೆಯನ್ನು ಹಾಳುಗೆಡವಿರುವುದು ಗಮನಕ್ಕೆ ಬಂದಿಲ್ಲ ಎಂದರು. ಬಿಜೆಪಿ ಅಧ್ಯಕ್ಷರು ನಿಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿದ್ದು, ನಿಟ್ಟೆ ಗ್ರಾಮದ ಸಂಪೂರ್ಣ ಅರಿವಿರುವವರಾಗಿದ್ದು ಶಿಶುಮಂದಿರ ಬಾಳೆಹಿತ್ಲು ರಸ್ತೆಯನ್ನು ತಮ್ಮದೇ ಪಕ್ಷದವರು ಅಗೆದು ಹಾಳುಗೆಡವಿದ್ದಾರೂ ತಿಳಿದಿಲ್ಲ ಏಕೆ ? ಎಂದರು.

ಈ ರಸ್ತೆಗೆ 2023 ವಿಧಾನಸಭಾ ಚುನಾವಣೆಗೆ ಒಂದು ತಿಂಗಳ ಮುಂಚಿತವಾಗಿ ಟೆಂಡರ್ ಪ್ರಕ್ರಿಯೆ ನಡೆಸದೇ, ವರ್ಕ್ ಆರ್ಡರ್ ಇಲ್ಲದೆ ಬಿಜೆಪಿ ಮುಖಂಡ ಜಯರಾಮ ಸಾಲಿಯಾನ್ ಬೋಳ ಎನ್ನುವವರು ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿ ಸರ್ಕಾರದ ಸ್ವತ್ತಿಗೆ ಹಾನಿ ಎಸಗಿರುತ್ತಾರೆ. ಯಾವುದೇ ಸರಕಾರಿ ಟೆಂಡರ್ ಅಥವಾ ಇಲಾಖೆಯ ಅನುಮತಿಯಿಲ್ಲದೇ ಸುಸ್ಥಿತಿಯಲ್ಲಿದ್ದ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ತನ್ನ ಖಾಸಗಿ ಸ್ವತ್ತಿನಂತೆ ಬಳಸಿರುವ ಇವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು ಎಂದು ಬೇಲಾಡಿ ಆಗ್ರಹಿಸಿದರು.

ಸುನಿಲ್ ಕುಮಾ‌ರ್ ಅವರು ಕಾರ್ಕಳದಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕದ 21 ವರ್ಷಗಳಿಂದ ಕಾರ್ಕಳದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿದೆ. ರಾಜ್ಯದಲ್ಲಿಯೇ ಸುದ್ದಿಯಾದ ಪರಶುರಾಮ ಥೀಮ್ ಪಾರ್ಕ್ ಕಂಚಿನ ಪ್ರತಿಮೆ ಎಂದು ಜನರನ್ನು ನಂಬಿಸಿ ಹೇಳಿ ಫೈಬರ್ ಪ್ರತಿಮೆ ನಿಲ್ಲಿಸಿ ಇಡೀ ದೇಶದ ಮುಂದೆ ಕಾರ್ಕಳದ ಘನತೆಗೆ ಕುಂದುಂಟು ಮಾಡಿದ್ದಾರೆ ಎಂದರು.

ಆಗ್ರಹ
ರಂಗಾಯಣದ ಕಳಪೆ ಕಾಮಗಾರಿಯ ಬಗ್ಗೆ ಉನ್ನತ ಮಟ್ಟದ ತಾಂತ್ರಿಕ ತನಿಖೆಯಾಗಬೇಕು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. ನಿಟ್ಟೆ ಗ್ರಾಮದ ಶಿಶುಮಂದಿರ ಬಾಳೆಹಿತ್ಲು ರಸ್ತೆ ಅಗೆದ ಜಯರಾಮ ಸಾಲ್ಯಾನ್ ಅವರಿಂದಲೇ ರಸ್ತೆ ದುರಸ್ತಿ ವೆಚ್ಚವನ್ನು ವಸೂಲಿ ಮಾಡಬೇಕು. 21 ವರ್ಷಗಳ ಅವಧಿಯಲ್ಲಿ ನಡೆದ ಎಲ್ಲಾ ಯೋಜನೆಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಕಾರ್ಕಳದ ಜನತೆಯ ಹಿತದೃಷ್ಟಿಯಿಂದ ಯುವ ಕಾಂಗ್ರೆಸ್ ಈ ಹೋರಾಟವನ್ನು ಮುಂದುವರಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್‌ ಮುಖಂಡರು ಹೇಳಿದರು.









































error: Content is protected !!
Scroll to Top